ಭೂಮಿ ತೊರೆದು ಇತರ ಗ್ರಹಗಳಲ್ಲಿ ವಾಸಿಸುವ ಕಲ್ಪನೆ ಅವಾಸ್ತವಿಕ: ನೊಬೆಲ್ ಪ್ರಶಸ್ತಿ ವಿಜೇತ ಭೌತ ವಿಜ್ಞಾನಿ

Update: 2019-12-08 15:48 GMT

ಸ್ಟಾಕ್‌ಹೋಮ್ (ಸ್ವೀಡನ್), ಡಿ. 8: ಹವಾಮಾನ ಬಿಕ್ಕಟ್ಟನ್ನು ಸರಿಪಡಿಸಿ ಹಾಗೂ ಭೂಮಿಯನ್ನು ಉಳಿಸಿ ಎಂದು ಈ ವರ್ಷದ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರ ಪೈಕಿ ಓರ್ವರಾಗಿರುವ ಸ್ವಿಟ್ಸರ್‌ಲ್ಯಾಂಡ್‌ನ ಖಗೋಳ ವಿಜ್ಞಾನಿ ಡಿಡಿಯರ್ ಕ್ವೆಲೋಝ್ ಶನಿವಾರ ಜಾಗತಿಕ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಈ ಭೂಮಿಯನ್ನು ತೊರೆದು ಇತರ ಸೌರ ವ್ಯೂಹಗಳಲ್ಲಿ ವಾಸಿಸುವ ಕಲ್ಪನೆಯು ಊಹೆಗೆ ನಿಲುಕದ ಹಾಗೂ ಅವಾಸ್ತವಿಕ ಕಲ್ಪನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಅತಿ ದೂರದ ನಕ್ಷತ್ರಗಳ ಸುತ್ತ ಸುತ್ತುವ ಗ್ರಹಗಳನ್ನು ಪತ್ತೆಹಚ್ಚಿರುವುದಕ್ಕಾಗಿ ಅವರಿಗೆ 2019ರ ನೊಬೆಲ್ ಭೌತಶಾಸ್ತ್ರ ಪ್ರಶಸ್ತಿ ಲಭಿಸಿದೆ.

‘ಒಂದು ಹಂತದಲ್ಲಿ ನಾವು ಭೂಮಿಯನ್ನು ತೊರೆದು ಹೋಗುವುದು ನಿಶ್ಚಿತವಾಗಿರುವಾಗ’ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ವಾದವನ್ನು ನಾನು ಕೇಳಿದ್ದೇನೆ ಎಂದು ಅವರು ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅವರು ಸ್ಟಾಕ್‌ಹೋಮ್‌ನಲ್ಲಿ ಮಂಗಳವಾರ ತನ್ನ ನೊಬೆಲ್ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.

‘‘ಆದರೆ, ಇದು ಬೇಜವಾಬ್ದಾರಿಯುತ ಚಿಂತನೆ. ಯಾಕೆಂದರೆ, ಆ ನಕ್ಷತ್ರಗಳು ಎಷ್ಟು ಅಗಾಧ ದೂರದಲ್ಲಿವೆಯೆಂದರೆ ನಾವು ಭೂಮಿಯಿಂದ ಹೊರ ಹೋಗುವ ಯಾವುದೇ ಭರವಸೆ, ಗಂಭೀರ ಭರವಸೆಯನ್ನು ಇಟ್ಟುಕೊಳ್ಳುವಂತಿಲ್ಲ’’ ಎಂದರು.

‘‘ಹಾಗಾಗಿ, ನಾವು ಭೂಮಿಯನ್ನು ನಾಶಪಡಿಸಿ ಹೊರಹೋಗುತ್ತೇವೆ ಎಂದು ಕಲ್ಪಿಸುವುದನ್ನು ಬಿಟ್ಟು ಭೂಮಿಯನ್ನು ಉಳಿಸಲು ನಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕು’’ ಎಂದು ಅವರು ಹೇಳಿದರು.

ಮಾನವರು ಭೂಮಿ ತೊರೆಯಬೇಕಾಗಬಹುದು ಎಂದಿದ್ದ ಸ್ಟೀಫನ್ ಹಾಕಿಂಗ್

ದಿವಂಗತ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸೇರಿದಂತೆ ಹಲವು ವಿಜ್ಞಾನಿಗಳು, ಪರಮಾಣು ಯುದ್ಧ ಮತ್ತು ಹವಾಮಾನ ಬದಲಾವಣೆ ಮುಂತಾದ ಬೆದರಿಕೆಗಳು ಎಷ್ಟು ಗಂಭೀರವಾಗಿದೆಯೆಂದರೆ, ಮಾನವ ಕುಲದ ಉಳಿವಿಗಾಗಿ ಮಾನವರು ಮುಂದೊಂದು ದಿನ ಭೂಮಿಯಿಂದ ಹೊರಹೋಗಬೇಕಾಗಬಹುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News