ರಣಜಿ ಟ್ರೋಫಿ: ಪೃಥಿವ ಶಾ ದ್ವಿ ಶತಕ

Update: 2019-12-11 17:56 GMT

ವಡೋದರಾ, ಡಿ.11: ಡೋಪಿಂಗ್ ಆರೋಪದಲ್ಲಿ ಎಂಟು ತಿಂಗಳ ಕಾಲ ಕ್ರಿಕೆಟ್‌ನಿಂದ ಅನಮಾತುಗೊಂಡು, ಇದೀಗ ಮತ್ತೆ ಕ್ರಿಕೆಟ್‌ಗೆ ವಾಪಸಾಗಿರುವ ಪೃಥ್ವಿ ಶಾ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನದೊಂದಿಗೆ ಪುನರಾಗಮನ ಮಾಡಿದ್ದಾರೆ.

ಅವರು ಬರೋಡಾ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಇಂದು ದ್ವಿಶತಕ ದಾಖಲಿಸಿದ್ದಾರೆ. ಪಂದ್ಯದ ಮೂರನೇ ದಿನವಾಗಿರುವ ಬುಧವಾರ ಶಾ 179 ಎಸೆತಗಳಲ್ಲಿ 19 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ 202 ರನ್ ಗಳಿಸಿದರು.

ಶಾ ದ್ವಿಶತಕದ ನೆರವಿನಲ್ಲಿ ಮುಂಬೈ ಎರಡನೇ ಇನಿಂಗ್ಸ್ ನಲ್ಲಿ 66.6 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 409 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ದಿನದಾಟದಂತ್ಯಕ್ಕೆ ಬರೋಡಾ ಎರಡನೇ ಇನಿಂಗ್ಸ್ ನಲ್ಲಿ 16.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 74 ರನ್ ಗಳಿಸಿದೆ. 41ರನ್ ಗಳಿಸಿರುವ ವೀರಜ್ ಭೋಸ್ಲೆ , ಆದಿತ್ಯ ವಾಗ್ಮೋಡೆ (3), ಮತ್ತು ವಿ.ಪಿ. ಸೋಲಂಕಿ(8) ಔಟಾಗಿದ್ದಾರೆ.

 ಮೊದಲ ಇನ್ನಿಂಗ್ಸ್‌ನಲ್ಲಿ 62 ಎಸೆತಗಳಲ್ಲಿ 66 ರನ್ ಗಳಿಸಿದ ಪೃಥ್ವಿ ಶಾ, ಎರಡನೇ ಇನಿಂಗ್ಸ್‌ನಲ್ಲಿ

ಕೇವಲ 84 ಎಸೆತಗಳಲ್ಲಿ 9 ನೆೇ ಪ್ರಥಮ ದರ್ಜೆ ಶತಕವನ್ನು ದಾಖಲಿಸಿದರು. ಬಳಿಕ ದ್ವಿಶತಕದ ಸಾಧನೆ ಮಾಡಿದರು.

ಎರಡನೇ ದಿನದಾಟದಂತ್ಯಕ್ಕೆ ಬರೋಡಾ 69 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 301 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿ 307 ರನ್‌ಗಳಿಗೆ ಆಲೌಟಾಯಿತು.

ಮುಂಬೈ ಪರ ಎರಡನೇ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಮತ್ತು ಜೈ ಬಿಸ್ತಾ ಮೊದಲ ವಿಕೆಟ್‌ಗೆ 190 ರನ್ ಸೇರಿಸಿದರು. ಬಿಸ್ತಾ 68 ರನ್ ಗಳಿಸಿ ಔಟಾದರು. ಬಳಿಕ ಸೊಪಾರಿಯಾ ದಾಳಿಗೆ ಸಿಲುಕಿದ ಮುಂಬೈ ಮತ್ತೆರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ರಂಜನೆ (2) ಮತ್ತು ಅಜಿಂಕ್ಯ ರಹಾನೆ (9) ನಿರ್ಗಮಿಸಿದರು. ಶಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್ 4ನೇ ವಿಕೆಟ್‌ಗೆ 78 ರನ್‌ಗಳ ಜೊತೆಯಾಟ ನೀಡಿದರು. ಸೂರ್ಯಕುಮಾರ್ ಯಾದವ್ ಶತಕ (102) ದಾಖಲಿಸಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. ಬರೋಡಾ ಗೆಲುವಿಗೆ 534 ರನ್‌ಗಳ ಸವಾಲು ಪಡೆದಿದೆ.

ನ್ಯೂಝಿಲ್ಯಾಂಡ್ ಪ್ರವಾಸದಲ್ಲಿ ಮೂರನೇ ಟೆಸ್ಟ್ ಓಪನರ್ ಸ್ಥಾನಕ್ಕಾಗಿ ಇದೀಗ ಶಾ ಹಕ್ಕು ಮಂಡಿಸಿದ್ದಾರೆ.

20ರ ಹರೆಯದ ಶಾ ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ವೃತ್ತಿಜೀವನಕ್ಕೆ ಕಾಲಿಟ್ಟಿದ್ದರು. ಮೊದಲ ಟೆಸ್ಟ್‌ನಲ್ಲಿ ಚೊಚ್ಚಲ ಶತಕವನ್ನು ಗಳಿಸಿದರು ಮತ್ತು ಎರಡನೇ ಟೆಸ್ಟ್ ನಲ್ಲಿ ಅರ್ಧಶತಕವನ್ನು ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News