ಸ್ಟಾರ್ಕ್ ದಾಳಿಗೆ ಕಿವೀಸ್ ಆರಂಭಿಕ ಕುಸಿತ

Update: 2019-12-13 18:18 GMT

ಪರ್ತ್, ಡಿ.13: ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್(4-31)ಉರಿ ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್ ಮೊದಲ ಟೆಸ್ಟ್ ನ ಎರಡನೇ ದಿನವಾದ ಶುಕ್ರವಾರ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

 ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮೊತ್ತ 416 ರನ್‌ಗೆ ಉತ್ತರವಾಗಿ ನ್ಯೂಝಿಲ್ಯಾಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 109 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಹಿರಿಯ ಬ್ಯಾಟ್ಸ್‌ಮನ್ ರಾಸ್ ಟೇಲರ್(ಔಟಾಗದೆ 66) ಹಾಗೂ ಬಿ.ಜೆ. ವಾಟ್ಲಿಂಗ್(0)ಕ್ರೀಸ್ ಕಾಯ್ದುಕೊಂಡಿದ್ದಾರೆ.

31 ರನ್‌ಗೆ ಒಟ್ಟು 4 ವಿಕೆಟ್‌ಗಳನ್ನು ಉರುಳಿಸಿದ ಸ್ಟಾರ್ಕ್ ನಾಯಕ ಕೇನ್ ವಿಲಿಯಮ್ಸನ್(34) ವಿಕೆಟನ್ನು ಪಡೆದ ಬಳಿಕ ಸತತ ಎಸೆತಗಳಲ್ಲಿ ಹೆನ್ರಿ ನಿಕೊಲ್ಸ್(7) ಹಾಗೂ ನೈಟ್ ವಾಚ್‌ಮ್ಯಾನ್ ನೀಲ್ ವಾಗ್ನರ್(0)ವಿಕೆಟ್‌ಗಳನ್ನು ಉರುಳಿಸಿದರು.

 ನ್ಯೂಝಿಲ್ಯಾಂಡ್ ಮೊದಲ 10 ಎಸೆತಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಲಥಾಮ್(0) ಹಾಗೂ ಜೀತ್ ರಾವಲ್(1) ವಿಕೆಟ್‌ಗಳನ್ನು ಕಳೆದುಕೊಂಡಿತು. ಲಥಾಮ್ ಇನಿಂಗ್ಸ್‌ನ ಐದನೇ ಎಸೆತದಲ್ಲಿ ಖಾತೆ ತೆರೆಯುವ ಮೊದಲೇ ಸ್ಟಾರ್ಕ್‌ಗೆ ರಿಟರ್ನ್ ಕ್ಯಾಚ್ ನೀಡಿದರು. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಬೌಲಿಂಗ್‌ನಲ್ಲಿ ಜೀತ್ ರಾವಲ್ ಕ್ಲೀನ್‌ಬೌಲ್ಡಾದರು. ಹೇಝಲ್‌ವುಡ್‌ಗೆ ಸ್ನಾಯುಸೆಳೆತ ಕಾಣಿಸಿಕೊಂಡ ಕಾರಣ ಮೈದಾನದಿಂದ ಹೊರ ನಡೆದರು. ಹೀಗಾಗಿ ನಾಯಕ ಟಿಮ್ ಪೈನ್‌ಗೆ ಸೀಮಿತ ಬೌಲಿಂಗ್ ಆಯ್ಕೆ ಇದ್ದವು. ಪಾರ್ಟ್ ಟೈಮ್ ಬೌಲರ್ ಮ್ಯಾಥ್ಯೂ ವೇಡ್‌ಗೆ ಬೌಲಿಂಗ್ ಅವಕಾಶ ನೀಡಲಾಯಿತು. ಆದರೆ ಅವರು ಹೆಚ್ಚು ಯಶಸ್ಸು ಕಾಣಲಿಲ್ಲ.

ಕಿವೀಸ್ 1 ರನ್‌ಗೆ 2 ವಿಕೆಟ್ ಕಳೆದುಕೊಂಡಾಗ ಜೊತೆಯಾದ ನಾಯಕ ವಿಲಿಯಮ್ಸನ್ ಹಾಗೂ ಟೇಲರ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿದರು. ವಿಲಿಯಮ್ಸನ್ ಅವರು ಸ್ಟಾರ್ಕ್ ಬೌಲಿಂಗ್‌ನಲ್ಲಿ ಸೆಕೆಂಡ್ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಿರತವಾಗಿದ್ದ ಸ್ಟೀವ್ ಸ್ಮಿತ್ ಒಂದೇ ಕೈಯಲ್ಲಿ ಮೇಲಕ್ಕೆ ಹಾರಿ ಪಡೆದ ಆಕರ್ಷಕ ಕ್ಯಾಚ್‌ಗೆ ಔಟಾದರು.

86 ಎಸೆತಗಳಲ್ಲಿ 8 ಬೌಂಡರಿ ಸಹಿತ ಔಟಾಗದೆ 66 ರನ್ ಗಳಿಸಿದ ಟೇಲರ್ ಕಿವೀಸ್‌ನ ಆಶಾಕಿರಣವಾಗಿದ್ದಾರೆ.

ಆಸ್ಟ್ರೇಲಿಯ 416 ಆಲೌಟ್ 

: ಇದಕ್ಕೂ ಮೊದಲು ಆಸ್ಟ್ರೇಲಿಯ 4 ವಿಕೆಟ್ ನಷ್ಟಕ್ಕೆ 248 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಔಟಾಗದೆ 110 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಲ್ಯಾಬುಶೆನ್(143, 240 ಎಸೆತ, 18 ಬೌಂಡರಿ, 1 ಸಿಕ್ಸರ್)ಟ್ರಾವಿಸ್ ಹೆಡ್(56, 97 ಎಸೆತ, 10 ಬೌಂಡರಿ)ಅವರೊಂದಿಗೆ 4ನೇ ವಿಕೆಟ್‌ಗೆ 76 ರನ್ ಜೊತೆಯಾಟ ನಡೆಸಿದರು. 143 ರನ್‌ಗೆ ಔಟಾದ ದಕ್ಷಿಣ ಆಫ್ರಿಕಾ ಸಂಜಾತ ಲ್ಯಾಬುಶೆನ್ ಸತತ ಮೂರು ಬಾರಿ 150ಕ್ಕೂ ಅಧಿಕ ರನ್ ಗಳಿಸಿದ 3ನೇ ಟೆಸ್ಟ್ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವುದರಿಂದ ವಂಚಿತರಾದರು. ನ್ಯೂಝಿಲ್ಯಾಂಡ್ ಪರ ದಣಿವಿಲ್ಲದೆ ಬೌಲಿಂಗ್ ಮಾಡಿದ ನೀಲ್ ವಾಗ್ನರ್(4-92) ಹಾಗೂ ಟಿಮ್ ಸೌಥಿ(4-93)ತಲಾ 4 ವಿಕೆಟ್‌ಗಳನ್ನು ಪಡೆದರು. 1985-86ರಲ್ಲಿ ಏಕೈಕ ಟೆಸ್ಟ್ ಸರಣಿಯನ್ನು ಜಯಿಸಿದ ಬಳಿಕ ನ್ಯೂಝಿಲ್ಯಾಂಡ್ ಆಸ್ಟ್ರೇಲಿಯ ನೆಲದಲ್ಲಿ ಏಕೈಕ ಟೆಸ್ಟ್ ಪಂದ್ಯ ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News