ವರ್ಷದ 11ನೇ ಪ್ರಶಸ್ತಿಯತ್ತ ಮೊಮೊಟಾ ಚಿತ್ತ

Update: 2019-12-14 17:12 GMT

ಶಾಂಘೈ, ಡಿ.14: ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿಯಲ್ಲಿ ರವಿವಾರ ನಡೆಯುವ ಪುರುಷರ ಸಿಂಗಲ್ಸ್ ಫೈನಲ್‌ಗೆ ತೇರ್ಗಡೆಯಾಗಿರುವ ಜಪಾನ್‌ನ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕೆಂಟೊ ಮೊಮೊಟಾ ಈ ವರ್ಷ 11ನೇ ಪ್ರಶಸ್ತಿ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.

ಈಗಾಗಲೇ 10 ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಮೊಮೊಟಾ ಫೈನಲ್‌ನಲ್ಲಿ ಇಂಡೋನೇಶ್ಯದ ಅಂಥೋನಿ ಸಿನಿಸುಕಾ ಜಿಂಟಿಂಗ್ ಸವಾಲನ್ನ್ನು ಎದುರಿಸಲಿದ್ದಾರೆ.

ವಿಶ್ವದ ನಂ.1 ಆಟಗಾರ ಮೊಮೊಟಾ ಈ ವರ್ಷ ಅಮೋಘ ಪ್ರದರ್ಶನ ನೀಡಿದ್ದು, ಶನಿವಾರ ಗ್ವಾಂಗ್‌ಝೌನಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ತೈವಾನ್‌ನ ವಾಂಗ್ ಝು ವೀ ಅವರನ್ನು 21-17, 21-12 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ. ಪ್ರಸ್ತುತ ಭರ್ಜರಿ ಫಾರ್ಮ್ ನಲ್ಲಿರುವ ಮೊಮೊಟಾ ವಿಶ್ವ ಚಾಂಪಿಯನ್‌ಶಿಪ್, ಏಶ್ಯ ಚಾಂಪಿಯನ್‌ಶಿಪ್ ಹಾಗೂ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್ ಸಹಿತ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಎತ್ತಿದ್ದಾರೆ. ಜಿಂಟಿಂಗ್ ವಿರುದ್ಧ ಆಡಿರುವ 14 ಪಂದ್ಯಗಳ ಪೈಕಿ 10 ಬಾರಿ ಜಯ ಸಾಧಿಸಿರುವ ಮೊಮೊಟಾ ಫೈನಲ್ ಪಂದ್ಯ ಗೆಲ್ಲುವ ಫೇವರಿಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವಿಶ್ವದ ನಂ.8ನೇ ಆಟಗಾರ ಜಿಂಟಿಂಗ್ ಮತ್ತೊಂದು ಸೆಮಿ ಫೈನಲ್‌ನಲ್ಲಿ ಚೀನಾದ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್‌ರನ್ನು 21-15, 21-15 ಅಂತರದಿಂದ ಸೋಲಿಸಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಿಶ್ವದ ನಂ.2ನೇ ಆಟಗಾರ ಚೆನ್ ಯುಫೀ ತೈವಾನ್‌ನ ಅಗ್ರ ರ್ಯಾಂಕಿನ ತೈ ಝು-ಯಿಂಗ್‌ರನ್ನು ಎದುರಿಸಲಿದ್ದಾರೆ.

ಚೆನ್ ಮೊದಲ ಸೆಮಿ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು 21-18, 21-9 ಅಂತರದಿಂದ ಮಣಿಸಿದರು. ತೈ ಇನ್ನೋರ್ವ ಜಪಾನ್ ಆಟಗಾರ್ತಿ ನೊರೊಮಿ ಒಕುಹರಾರನ್ನು 21-15, 21-18 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News