ಇಂದು ಭಾರತ -ವಿಂಡೀಸ್ ಮೊದಲ ಏಕದಿನ ಪಂದ್ಯ

Update: 2019-12-14 17:17 GMT

ಚೆನ್ನೈ, ಡಿ.14: ಭಾರತ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯ ಮೊದಲ ಪಂದ್ಯ ರವಿವಾರ ಇಲ್ಲಿ ನಡೆಯಲಿದೆ. ದ್ವಿಪಕ್ಷೀಯ ಸರಣಿಯಲ್ಲಿ ಸತತ 10ನೇ ಗೆಲುವಿಗೆ ಟೀಮ್ ಇಂಡಿಯಾ ಪ್ರಯತ್ನದಲ್ಲಿದೆ.

ಪಂದ್ಯಕ್ಕೆ ಮಳೆಯ ಅಡ್ಡಿಯೂ ಎದುರಾಗಿದೆ. ಈಗಾಗಲೇ ಚೆನ್ನೈನಲ್ಲಿ ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣ ತಿಳಿಯಾಗಿಲ್ಲ. ರಾತ್ರಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಭಾರತ ತಂಡದ ಅಭ್ಯಾಸಕ್ಕೆ ಇಂದು ಅಡ್ಡಿಯಾಗಿತ್ತು. ತೊಡೆಸಂದು ಸಮಸ್ಯೆ ಎದುರಿಸುತ್ತಿರುವ ವೇಗಿ ಭುವನೇಶ್ವರ ಕುಮಾರ್ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯ ವೇಳೆ ಗಾಯಗೊಂಡು ಇನ್ನೂ ಚೇತರಿಸಿಕೊಳ್ಳದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಸೇವೆಯಿಂದ ತವರು ತಂಡ ವಂಚಿತಗೊಂಡಿದೆ. ಮುಂಬೈನ ಶಾರ್ದುಲ್ ಠಾಕೂರ್ ಅವರನ್ನು ಗಾಯಾಳು ಭುವ ನೇಶ್ವರ ಬದಲಿಯಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

 ಮುಂಬೈನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಟ್ವೆಂಟಿ- 20 ಸರಣಿಯನ್ನು ಗೆದ್ದ ನಂತರ ವಿರಾಟ್ ಕೊಹ್ಲಿ ತಂಡ ಅದೇ ಪ್ರದರ್ಶನವನ್ನು ಏಕದಿನ ಸರಣಿಯಲ್ಲೂ ಮುಂದುವರಿಸುವ ಯೋಜನೆಯಲ್ಲಿದೆ. ಧವನ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ನಾಯಕ ವಿರಾಟ್ ಕೊಹ್ಲಿ ಅಪೂರ್ವ ಫಾರ್ಮ್‌ನಲ್ಲಿದ್ದಾರೆ.

ಧವನ್ ಬದಲಿಗೆ ಮಾಯಾಂಕ್ ಅಗರ್ವಾಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಕರ್ನಾಟಕ ಬ್ಯಾಟ್ಸ್‌ಮನ್ ಅಗರ್ವಾಲ್ ಟೆಸ್ಟ್‌ನಲ್ಲಿ ಅಗ್ರ ಫಾರ್ಮ್‌ನಲ್ಲಿದ್ದಾರೆ ಮತ್ತು ದಿಂಡಿಗಲ್‌ನಲ್ಲಿ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಭಾಗವಹಿಸಿದ ನಂತರ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ಅವರು ಚೊಚ್ಚಲ ಏಕದಿನ ಪಂದ್ಯವನ್ನಾಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

 ಶ್ರೇಯಸ್ ಅಯ್ಯರ್ ಪಡೆದ ಅವಕಾಶಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಮತ್ತು ಬ್ಯಾಟಿಂಗ್‌ನಲ್ಲಿ 4ನೇ ಕ್ರಮಾಂಕದಲ್ಲಿದ್ದಾರೆ. ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 4ನೇ ಕ್ರಮಾಂಕದಲ್ಲಿರುವ ಮುಂಬೈ ಆಟಗಾರ ಬ್ಯಾಟಿಂಗ್ ಪರ ಒಲವು ತೋರಿದ್ದಾರೆ.

ಅಂಬಟಿ ರಾಯುಡು ಮತ್ತು ವಿಜಯ್ ಶಂಕರ್ ಸೇರಿದಂತೆ ಹಲವು ಆಟಗಾರರು ಈ ಸ್ಥಾನದ ಮೇಲೆ ಕಣ್ಣಿಟ್ಟು ಆಡಿದ್ದರು. ಇದೀಗ ಅಯ್ಯರ್ ಸ್ಥಾನವನ್ನು ದೃಢಪಡಿಸುವ ಯೋಜನೆಯಲ್ಲಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ತಮ್ಮ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಅವರಿಗೆ ಕೊಹ್ಲಿ ಮತ್ತು ತಂಡದ ಮ್ಯಾನೇಜ್‌ಮೆಂಟ್ ತೋರಿಸಿದ ನಂಬಿಕೆಯನ್ನು ಸಮರ್ಥಿಸಲು ಮತ್ತೊಂದು ಅವಕಾಶ ಸಿಗಲಿದೆ.

ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಒಟ್ಟಿಗೆಆಡಿದ ಯಜುವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಮತ್ತೆ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೋ ಎಂಬುದು ಕುತೂಹಲ ಕೆರಳಿಸಿದೆ. ಏಕೆಂದರೆ ಚಿಪಾಕ್ ಪಿಚ್ ನಿಧಾನಗತಿಯ ಬೌಲರ್‌ಗಳಿಗೆ ನೆರವಾಗುವುದನ್ನು ನಿರೀಕ್ಷಿಸಲಾಗಿದೆ.ಅನುಭವಿ ವೇಗಿ ಮುಹಮ್ಮದ್ ಶಮಿ ಮತ್ತು ದೀಪಕ್ ಚಹಾರ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಆಕ್ರಮಣಕಾರಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮುಂದೆ ಭಾರತದ ಬೌಲಿಂಗ್ ದಾಳಿ ಪರೀಕ್ಷೆಗೊಳಪಡಲಿದೆ.

ಮುಂಬೈನಲ್ಲಿ ನಡೆದ ಅಂತಿಮ ಟ್ವೆಂಟಿ-20 ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಎವಿನ್ ಲೂಯಿಸ್ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ವಿಶ್ವಾಸವನ್ನು ವೆಸ್ಟ್ ಇಂಡೀಸ್ ಹೊಂದಿದೆ. ಪಂದ್ಯ ಆರಂಭಕ್ಕೂ ಮುನ್ನ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಕಳೆದ ಟ್ವೆಂಟಿ-20ಯಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ. ಶಿಮ್ರಾನ್ ಹೆಟ್ಮೆಯರ್ ಮತ್ತು ನಿಕೊಲಸ್ ಪೂರನ್ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಈ ಸರಣಿಯಲ್ಲೂ ಭಾರತಕ್ಕೆ ಸವಾಲು ನೀಡಲಿದೆ. ಆಲ್‌ರೌಂಡರ್ ರೋಸ್ಟನ್ ಚೇಸ್ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಏಕದಿನ ಪಂದ್ಯಗಳಲ್ಲಿ ಸಾಧಾರಣ ದಾಖಲೆಯನ್ನು ಹೊಂದಿರುವ ನಾಯಕ ಕೀರನ್ ಪೊಲಾರ್ಡ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ.

ಶೆಲ್ಡನ್ ಕಾಟ್ರೆಲ್ ಕೆರಿಬಿಯನ್ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ರೋಹಿತ್, ಕೊಹ್ಲಿ ಮತ್ತು ರಾಹುಲ್ ಉತ್ತಮ ಫಾರ್ಮ್ ನಲ್ಲಿ

ದ್ದಾರೆ. ಬೌಲರ್ ಹೇಡನ್ ವಾಲ್ಶ್ ಜೂನಿಯರ್ ಟ್ವೆಂಟಿ-20 ಸರಣಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಅವರು ಅದೇ ಪ್ರದರ್ಶನವನ್ನು ಏಕದಿನ ಸರಣಿಯಲ್ಲೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News