ಮೊದಲ ಟೆಸ್ಟ್ ಆಸ್ಟ್ರೇಲಿಯಕ್ಕೆ 417 ರನ್ ಮುನ್ನಡೆ

Update: 2019-12-14 17:24 GMT

ಪರ್ತ್, ಡಿ.14: ನ್ಯೂಝಿಲ್ಯಾಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಆಸ್ಟ್ರೇಲಿಯ ತಂಡ ಇಲ್ಲಿ ಹಗಲು-ರಾತ್ರಿ ನಡೆಯುತ್ತಿರುವ ಪ್ರಥಮ ಟೆಸ್ಟ್‌ನಲ್ಲಿ ಭಾರೀ ಮುನ್ನಡೆ ಪಡೆದು ಸುಸ್ಥಿತಿಯಲ್ಲಿದೆ. ಎರಡನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ 57 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿದ್ದು,ಒಟ್ಟು 417 ರನ್ ಮುನ್ನಡೆಯಲ್ಲಿದೆ. ಮ್ಯಾಥ್ಯೂ ವೇಡ್(8) ಹಾಗೂ ಕಮಿನ್ಸ್(1)ಕ್ರೀಸ್ ಕಾಯ್ದುಕೊಂಡಿದ್ದಾರೆ. ಆತಿಥೇಯರ ಪರ ಟಿಮ್ ಸೌಥಿ(4-63)ಯಶಸ್ವಿ ಬೌಲರ್ ಎನಿಸಿಕೊಂಡರು. ವಾಗ್ನರ್(2-40)ಸೌಥಿಗೆ ಸಾಥ್ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 250 ರನ್ ಮುನ್ನಡೆ ಪಡೆದುಕೊಂಡ ಆಸ್ಟ್ರೇಲಿಯ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದು, 3ನೇ ದಿನದಾಟದಂತ್ಯಕ್ಕೆ 167 ರನ್ ಗಳಿಸುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇನಿಂಗ್ಸ್ ಆರಂಭಿಸಿದ ವಾರ್ನರ್(19) ಹಾಗೂ ಬರ್ನ್ಸ್(53, 123 ಎಸೆತ, 6 ಬೌಂಡರಿ)ಮೊದಲ ವಿಕೆಟ್ ಜೊತೆಯಾಟದಲ್ಲಿ 44 ರನ್ ಗಳಿಸಿ ಸಾಧಾರಣ ಆರಂಭ ನೀಡಿದರು.

ವಾರ್ನರ್ ಬೇಗನೆ ಔಟಾದಾಗ ಜೊತೆಯಾದ ಬರ್ನ್ಸ್ ಹಾಗೂ ಲ್ಯಾಬುಶೆನ್ ಎರಡನೇ ವಿಕೆಟ್‌ಗೆ 87 ರನ್ ಗಳಿಸಿ ತಂಡವನ್ನು ಆಧರಿಸಿದರು. ಪ್ರಚಂಡ ಫಾರ್ಮ್‌ನಲ್ಲಿರುವ ಲ್ಯಾಬುಶೆನ್(50, 81 ಎಸೆತ,3 ಬೌಂಡರಿ)ಅರ್ಧಶತಕ ಗಳಿಸಿದ ತಕ್ಷಣ ವಾಗ್ನರ್‌ಗೆ ವಿಕೆಟ್ ಒಪ್ಪಿಸಿದರು. ಲ್ಯಾಬುಶೆನ್ ಈ ವರ್ಷ 1,000 ಟೆಸ್ಟ್ ರನ್ ಪೂರೈಸಿದ ಅಪೂರ್ವ ಸಾಧನೆ ಮಾಡಿದರು. ದಕ್ಷಿಣ ಆಫ್ರಿಕಾದ ಸಂಜಾತ ಲ್ಯಾಬುಶೆನ್ ಸತತ ನಾಲ್ಕನೇ ಶತಕ ಸಿಡಿಸುವ ವಿಶ್ವಾಸದಲ್ಲಿದ್ದರು. ಆದರೆ ವಾಗ್ನರ್ ಅವರ ಪುಲ್‌ಶಾಟ್‌ಗೆ ವಿಕೆಟ್ ಒಪ್ಪಿಸಿದರು. ಈ ವರ್ಷ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಯಲ್ಲಿ 774 ರನ್ ಗಳಿಸಿದ್ದ ಸ್ಟೀವನ್ ಸ್ಮಿತ್ ಕೇವಲ 16 ರನ್ ಗಳಿಸಿ ಕಳಪೆ ಪ್ರದರ್ಶನ ಮುಂದುವರಿಸಿದರು. ವಾರ್ನರ್ 19 ರನ್‌ಗೆ ಔಟಾಗುವ ಮೊದಲು ಟೆಸ್ಟ್‌ನಲ್ಲಿ 7,000 ರನ್ ಪೂರೈಸಿದರು.

ಬರ್ನ್ಸ್, ಸ್ಟೀವನ್ ಸ್ಮಿತ್(16), ಟ್ರಿಮ್ ಹೆಡ್(5)ಹಾಗೂ ಟಿಮ್ ಪೈನೆ(0)ಬೆನ್ನುಬೆನ್ನಿಗೆ ಔಟಾದ ಕಾರಣ ಕಾಂಗರೂ ಪಡೆ ಕುಸಿತದ ಹಾದಿ ಹಿಡಿಯಿತು.

ನ್ಯೂಝಿಲ್ಯಾಂಡ್ 166 ರನ್‌ಗೆ ಆಲೌಟ್: ಇದಕ್ಕೂ ಮೊದಲು 3ನೇ ದಿನವಾದ ಶನಿವಾರ 5 ವಿಕೆಟ್‌ಗಳ ನಷ್ಟಕ್ಕೆ 109 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ನ್ಯೂಝಿಲ್ಯಾಂಡ್ ಹಿರಿಯ ಆಟಗಾರ ರಾಸ್ ಟೇಲರ್ ಅವರ ಏಕಾಂಗಿ ಹೋರಾಟದ(80, 134 ಎಸೆತ, 9 ಬೌಂಡರಿ)ಹೊರತಾಗಿಯೂ ಮಿಚೆಲ್ ಸ್ಟಾರ್ಕ್(5-52) ಹಾಗೂ ಲಿಯೊನ್(2-48)ದಾಳಿಗೆ ತತ್ತರಿಸಿ 55.2 ಓವರ್‌ಗಳಲ್ಲಿ 166 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ವಿಲಿಯಮ್ಸನ್(34) ಹಾಗೂ ಗ್ರಾಂಡ್‌ಹೋಮ್(23)ಎರಡಂಕೆಯ ಸ್ಕೋರ್ ಗಳಿಸಿದರು. ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಆ್ಯಶಸ್ ಸರಣಿಯ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದ ಸ್ಟಾರ್ಕ್ ಗಾಯಗೊಂಡಿದ್ದ ಸಹ ಆಟಗಾರ ಜೋಶ್ ಹೇಝಲ್‌ವುಡ್ ಅನುಪಸ್ಥಿತಿಯಲ್ಲಿ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News