ಪಾಕ್-ಲಂಕಾ ಮೊದಲ ಟಸ್ಟ್ ನಾಲ್ಕನೇ ದಿನವೂ ಮಳೆ ಅಡ್ಡಿ

Update: 2019-12-14 17:29 GMT

ರಾವಲ್ಪಿಂಡಿ, ಡಿ.14: ರಾತ್ರಿಯಿಡೀ ಸುರಿದ ಮಳೆ ಹಾಗೂ ಮಂದ ಬೆಳಕಿನಿಂದಾಗಿ ಪಾಕಿಸ್ತಾನ ದಶಕಗಳ ಬಳಿಕ ತವರು ನೆಲದಲ್ಲಿ ಆಡುತ್ತಿರುವ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನ ನಾಲ್ಕನೇ ದಿನದಾಟ ಆರಂಭವಾಗುವ ಮೊದಲೇ ಒಂದು ಎಸೆತ ಕಾಣದೆ ರದ್ದಾಗಿದೆ.

ಮೈದಾನ ಸಿಬ್ಬಂದಿ ಪಿಚ್ ಹೊದಿಕೆಗಳ ಮೇಲಿನ ನೀರನ್ನು ತೆಗೆದು, ಸೂಪರ್ ಸೊಪರ್ ಯಂತ್ರವನ್ನು ಅದರ ಮೇಲೆ ಓಡಿಸಿದರು. ಆದರೆ, ಮೋಡಕವಿದ ವಾತಾವರಣ ಹಾಗೂ ಕಳಪೆ ಬೆಳಕಿನಿಂದಾಗಿ ಅಂಪೈರ್‌ಗಳಾದ ರಿಚರ್ಡ್ ಕೆಟ್ಟೆಲ್‌ಬೊರಫ್ ಹಾಗೂ ಮೈಕಲ್ ಗೌಫ್ ಸ್ಥಳೀಯ ಕಾಲಮಾನ ಮಧ್ಯಾಹ್ನ 12:00 ಗಂಟೆಗೆ ಪಂದ್ಯವನ್ನು ರದ್ದುಪಡಿಸಿದರು.

ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳೆರಡೂ ಇಸ್ಲಾಮಾಬಾದ್‌ನಲ್ಲಿರುವ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿವೆ.

ಶ್ರೀಲಂಕಾ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ದಿನ ಮಂದಬೆಳಕಿನಿಂದಾಗಿ 68.1 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿತ್ತು. 2ನೇ ದಿನ 18.2 ಓವರ್ ಹಾಗೂ ಮೂರನೇ ದಿನ 5.2 ಓವರ್‌ಗಳ ಪಂದ್ಯ ಆಡಲಷ್ಟೇ ಸಾಧ್ಯವಾಗಿತ್ತು.

ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 282 ರನ್ ಗಳಿಸಿದೆ. ಧನಂಜಯ ಡಿಸಿಲ್ವಾ(ಔಟಾಗದೆ 87) ಹಾಗೂ ದಿಲ್ರುವಾನ್ ಪೆರೇರ(ಔಟಾಗದೆ 6)ಕ್ರೀಸ್ ಕಾಯ್ದುಕೊಂಡಿದ್ದರು. 16ರ ಹರೆಯದ ಬೌಲರ್ ನಸೀಂ ಶಾ(2-83) ಹಾಗೂ ಶಾಹೀನ್ ಶಾ ಅಫ್ರಿದಿ(2-58)ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

ನಾಲ್ಕು ದಿನಗಳ ಆಟದಲ್ಲಿ ಹಲವು ಓವರ್‌ಗಳ ಪಂದ್ಯ ನಷ್ಟವಾಗಿದ್ದು, ಸ್ಪಷ್ಟ ಫಲಿತಾಂಶ ಬರುವ ಸಾಧ್ಯತೆ ಇಲ್ಲವಾಗಿದೆ.ಕರಾಚಿಯಲ್ಲಿ ಡಿ.19ರಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. 2009ರ ಮಾರ್ಚ್‌ನಲ್ಲಿ ಲಾಹೋರ್‌ನಲ್ಲಿ ಟೀಮ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಬಳಿಕ ಮೊದಲ ಬಾರಿ ಪಾಕ್‌ನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭದ್ರತೆಯ ಭೀತಿಯಿಂದಾಗಿ ವಿದೇಶಿ ತಂಡಗಳು ಪಾಕ್‌ಗೆಕ್ರಿಕೆಟ್ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ ಕಾರಣ ಪಾಕ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ಅಮಾನತಿನಲ್ಲಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News