ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ: ವಿಶ್ವಸಂಸ್ಥೆಯ ಆಯೋಗದ ವರದಿಯಲ್ಲಿ ಪಾಕ್‌ಗೆ ಖಂಡನೆ

Update: 2019-12-15 14:12 GMT

ವಾಶಿಂಗ್ಟನ್, ಡಿ. 15: ಪಾಕಿಸ್ತಾನದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಸರಕಾರದ ತಾರತಮ್ಯಕಾರಿ ಕಾನೂನು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದಾಳಿಗಳನ್ನು ನಡೆಸಲು ‘ತೀವ್ರವಾದಿ ಮನೋಭಾವ’ ಹೊಂದಿರುವ ಜನರಿಗೆ ಶಕ್ತಿ ತುಂಬಿದೆ ಎಂದು ವಿಶ್ವಸಂಸ್ಥೆಯ ಮಹಿಳೆಯರ ಸ್ಥಾನಮಾನ ಕುರಿತ ಆಯೋಗ (ಸಿಎಸ್‌ಡಬ್ಲು) ಹೇಳಿದೆ.

 ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಆಯೋಗವಾಗಿರುವ ಸಿಎಸ್‌ಡಬ್ಲ್ಯು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ ‘ಪಾಕಿಸ್ತಾನದ ಧಾರ್ಮಿಕ ಸ್ವಾತಂತ್ರ್ಯ ದಾಳಿಗೊಳಗಾಗುತ್ತಿದೆ’ ಎಂಬ ಶೀರ್ಷಿಕೆಯ 47 ಪುಟದ ವರದಿಯಲ್ಲಿ, ದೇವನಿಂದನೆ ಕಾನೂನುಗಳು ಮತ್ತು ಅಹ್ಮದೀಯ ವಿರೋಧಿ ಕಾನೂನನ್ನು ದ್ವೇಷ ಸಾಧನೆ ಮತ್ತು ರಾಜಕೀಕರಣಕ್ಕೆ ಹೆಚ್ಚೆಚ್ಚು ಬಳಸಲಾಗುತ್ತಿದೆ ಎಂದು ಅದು ತಿಳಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನಿಸಲು ಮಾತ್ರವಲ್ಲ, ರಾಜಕೀಯ ಲಾಭವನ್ನು ಪಡೆದುಕೊಳ್ಳಲೂ ಈ ಕಾನೂನುಗಳನ್ನು ಬಳಸಲಾಗುತ್ತಿದೆ ಎಂದು ಸಿಎಸ್‌ಡಬ್ಲ್ಯು ಹೇಳಿದೆ.

ಪಾಕಿಸ್ತಾನದಲ್ಲಿರುವ ಕ್ರೈಸ್ತ ಮತ್ತು ಹಿಂದೂ ಸಮುದಾಯಗಳು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಬಾಲಕಿಯರು ಮುಖ್ಯವಾಗಿ ಅಪಾಯದಲ್ಲಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

‘‘ಪ್ರತಿ ವರ್ಷ ನೂರಾರು ಮಹಿಳೆಯರು ಮತ್ತು ಬಾಲಕಿಯರನ್ನು ಅಪಹರಿಸಿ, ಮತಾಂತರಗೊಳ್ಳಲು ಹಾಗೂ ಮುಸ್ಲಿಮ್ ಪುರುಷರನ್ನು ಮದುವೆಯಾಗಲು ಬಲವಂತಪಡಿಸಲಾಗುತ್ತಿದೆ. ಅಪಹರಣಕಾರರು ಬಾಲಕಿಯರು ಮತ್ತು ಅವರ ಕುಟುಂಬಗಳಿಗೆ ಗಂಭೀರ ಬೆದರಿಕೆಗಳನ್ನು ಹಾಕುವುದರಿಂದ ಸಂತ್ರಸ್ತೆಯರು ತಮ್ಮ ಕುಟುಂಬಗಳಿಗೆ ಮರಳುವ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ಇದಕ್ಕೆ ಪೂರಕವಾಗಿ ಬಾಲಕಿಯರ ಅಪಹರಣಕಾರರ ವಿರುದ್ಧ ಕ್ರಮ ತೆಗೆದುಕೊಳ್ಳುವ ಯಾವುದೇ ಇಚ್ಛಾಶಕ್ತಿಯನ್ನು ಪೊಲೀಸರು ಹೊಂದಿಲ್ಲ ಹಾಗೂ ದುರ್ಬಲ ನ್ಯಾಯಾಂಗ ಪ್ರಕ್ರಿಯೆಯಿಂದ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ಅದೂ ಅಲ್ಲದೆ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಧಾರ್ಮಿಕ ಅಲ್ಪಸಂಖ್ಯಾತ ಸಂತ್ರಸ್ತರ ವಿರುದ್ಧ ತಾರತಮ್ಯ ಧೋರಣೆಯನ್ನು ಹೊಂದಿವೆ’’ ಎಂದು ವರದಿ ಹೇಳುತ್ತದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಬಿಂಬಿಸುವ ಹಲವಾರು ಪ್ರಮುಖ ಉದಾಹರಣೆಗಳನ್ನು ಆಯೋಗ ಉದಾಹರಿಸಿದೆ.

ಇಸ್ಲಾಮನ್ನು ಅವಹೇಳನ ಮಾಡುವವರನ್ನು ಶಿಕ್ಷಿಸುವ ಪಾಕಿಸ್ತಾನದ ದೇವನಿಂದನೆ ಕಾನೂನುಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ದುರುಪಯೋಗಪಡಿಸಲಾಗುತ್ತಿದೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಬಳಸಲಾಗುತ್ತಿದೆ ಎಂದು ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News