ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟ; ಇಬ್ಬರು ಇನ್ನೂ ನಾಪತ್ತೆ

Update: 2019-12-15 14:18 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಡಿ. 15: ನಾಪತ್ತೆಯಾಗಿರುವ ಇಬ್ಬರನ್ನು ಹುಡುಕುವುದಕ್ಕಾಗಿ ಶೋಧ ತಂಡಗಳು ರವಿವಾರ ಅಗ್ನಿಪರ್ವತವಿರುವ ನ್ಯೂಝಿಲ್ಯಾಂಡ್‌ನ ವೈಟ್ ಐಲ್ಯಾಂಡ್‌ಗೆ ಮರಳಿದವಾದರೂ, ಅವರನ್ನು ಜೀವಂತವಾಗಿ ಅಥವಾ ಅವರ ಮೃತದೇಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಡಿಸೆಂಬರ್ 9ರಂದು ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟಿಸಿದ ಬಳಿಕ, ಇಬ್ಬರು ನಾಪತ್ತೆಯಾಗಿದ್ದಾರೆ. ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ವೈಟ್ ಐಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಸ್ಫೋಟಿಸುವಾಗ ಅಲ್ಲಿ 47 ಮಂದಿ ಇದ್ದರು. ಈಗ ನಾಪತ್ತೆಯಾಗಿರುವ ಇಬ್ಬರನ್ನೂ ಸೇರಿಸಿ 17 ಮಂದಿಯನ್ನು ಮೃತ ಎಂದು ಘೋಷಿಸಲಾಗಿದೆ. ಉಳಿದ 30 ಮಂದಿ ಸಾವಿನ ದವಡೆಯಿಂದ ಪಾರಾಗಿ ತೀರಕ್ಕೆ ಮರಳಿದ್ದಾರೆ. ಅವರ ಪೈಕಿ 20 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯದ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ.

 ನಾಪತ್ತೆಯಾಗಿರುವ ಇಬ್ಬರ ದೇಹಗಳು ಸಮುದ್ರದಲ್ಲಿ ಇರಬಹುದು ಎಂಬುದಾಗಿ ಈಗ ಭಾವಿಸಲಾಗಿದೆ. ಶುಕ್ರವಾರ ನ್ಯೂಝಿಲ್ಯಾಂಡ್ ಸೈನಿಕರ ವಿಶೇಷ ತಂಡವೊಂದು ದ್ವೀಪದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ 6 ಮೃತದೇಹಗಳನ್ನು ಪತ್ತೆಹಚ್ಚಿತ್ತು. ಇನ್ನೊಂದು ಬಾರಿ ಜ್ವಾಲಾಮುಖಿ ಸ್ಫೋಟಿಸಬಹುದು ಎಂಬ ಭೀತಿಯ ನಡುವೆಯೇ ತಂಡವು ಪ್ರಾಣವನ್ನು ಪಣಕ್ಕಿಟ್ಟು ಕಾರ್ಯಾಚರಣೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News