ಎರಡನೇ ಏಕದಿನ: ಭಾರತಕ್ಕೆ 107 ರನ್‌ಗಳ ಭರ್ಜರಿ ಜಯ

Update: 2019-12-18 16:14 GMT

ವಿಶಾಖಪಟ್ಟಣ, ಡಿ.18: ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಲೋಕೇಶ್ ರಾಹುಲ್ ಶತಕದ ನೆರವಿನಲ್ಲಿ ಭಾರತ 107ರನ್‌ಗಳ ಜಯ ಗಳಿಸಿದೆ.

ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 388 ರನ್‌ಗಳ ಕಠಿಣ ಸವಾಲನ್ನು ಪಡೆದ ವೆಸ್ಟ್‌ಇಂಡೀಸ್ ತಂಡ 43.3 ಓವರ್‌ಗಳಲ್ಲಿ 280 ರನ್ ಗಳಿಸಲಷ್ಟೇ ಶಕ್ತವಾಗಿದೆ. ಇದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಕುಲ್‌ದೀಪ್ ಯಾದವ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಉಡಾಯಿಸಿ ಹ್ಯಾಟ್ರಿಕ್ ಪಡೆಯುವ ಮೂಲಕ ವೆಸ್ಟ್‌ಇಂಡೀಸ್‌ನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ನೆರವಾದರು.

ವೆಸ್ಟ್‌ಇಂಡೀಸ್ ತಂಡದ ವಿಕೆಟ್ ಕೀಪರ್ ಶೈ ಹೋಪ್(78) ಮತ್ತು ನಿಕೋಲಾಸ್ ಪೂರನ್(75) ಉತ್ತಮ ಬ್ಯಾಟಿಂಗ್ ಮೂಲಕ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸುವ ಯತ್ನ ನಡೆಸಿದರು. ಮೊದಲ ವಿಕೆಟ್‌ಗೆ ಎವಿನ್ ಲೆವಿಸ್ (30) ಮತ್ತು ಶೈ ಹೋಪ್ 11 ಓವರ್‌ಗಳಲ್ಲಿ 61 ರನ್‌ಗಳ ಕೊಡುಗೆ ನೀಡಿದರು. 16 ಓವರ್‌ಗಳಲ್ಲಿ 86ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವಿಂಡಿಸ್‌ನ ಬ್ಯಾಟಿಂಗ್ ಮುನ್ನಡೆಸಿದ ಹೋಪ್ ಮತ್ತು ಪೂರನ್ 4ನೇ ವಿಕೆಟ್‌ಗೆ 106 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಲು ಯತ್ನಿಸಿದರು. ಮುಹಮ್ಮದ್ ಶಮಿ ಈ ಜೋಡಿಯನ್ನು ಬೇರ್ಪಡಿಸಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 387 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News