ಐಪಿಎಲ್ ಇತಿಹಾಸದಲ್ಲಿ ಪ್ಯಾಟ್ ಕಮಿನ್ಸ್ ಅತ್ಯಂತ ದುಬಾರಿ ವಿದೇಶಿ ಆಟಗಾರ
ಕೋಲ್ಕತಾ, ಡಿ.19: ವಿಶ್ವದ ನಂ.1 ಟೆಸ್ಟ್ ಬೌಲರ್ ಪ್ಯಾಟ್ ಕಮಿನ್ಸ್ ಕೋಲ್ಕತಾದಲ್ಲಿ ಗುರುವಾರ ಅರಂಭವಾದ ಐಪಿಎಲ್ ಆಟಗಾರರ ಹರಾಜಿನಲ್ಲಿ ಭಾರೀ ಸುದ್ದಿ ಮಾಡಿದ್ದಾರೆ. ಬಿಡ್ ವೇಳೆ ಮೂರು ಕಡೆಯಿಂದ ಆಹ್ವಾನ ಪಡೆದಿದ್ದ ಆಸ್ಟ್ರೇಲಿಯದ ಕಮಿನ್ಸ್ 15.5 ಕೋ.ರೂ.ಗೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ಪಾಲಾದರು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರನಾಗಿ ಹೊರಹೊಮ್ಮಿದರು.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ಕಮಿನ್ಸ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಪೈಪೋಟಿ ನಡೆಸಿದವು.ಕೊನೆಯ ಕ್ಷಣದಲ್ಲಿ ಬಿಡ್‌ನಲ್ಲಿ ಭಾಗಿಯಾದ ಕೆಕೆಆರ್ 2 ಕೋ.ರೂ.ಮೂಲಬೆಲೆ ಹೊಂದಿದ್ದ ಕಮಿನ್ಸ್‌ರನ್ನು ಭಾರೀ ಮೊತ್ತಕ್ಕೆ ಖರೀದಿಸಿತು.
ಗರಿಷ್ಠ ಮೊತ್ತಕ್ಕೆ ಹರಾಜಾದ ವಿದೇಶಿ ಆಟಗಾರ ಎನಿಸಿಕೊಂಡಿರುವ ಕಮಿನ್ಸ್ ಇಂಗ್ಲೆಂಡ್‌ನ ಬೆನ್ಸ್ ಸ್ಟೋಕ್ಸ್ ದಾಖಲೆ ಮುರಿದರು. ಸ್ಟೋಕ್ಸ್ 2017ರ ಆವೃತ್ತಿಯ ಐಪಿಎಲ್‌ನಲ್ಲಿ 14.5 ಕೋ.ರೂ.ಗೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಪಾಲಾಗಿದ್ದರು.
ಕಮಿನ್ಸ್ ಕೇವಲ 6ರ ಇಕಾನಮಿಯಲ್ಲಿ ಈ ತನಕ 25 ಐಪಿಎಲ್ ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದಾರೆ.
2020ರ ಐಪಿಎಲ್ ಆಟಗಾರರ ಹರಾಜಿನ ಮೊದಲ ಎರಡು ಸೆಟ್‌ಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (ಮೂಲ ಬೆಲೆ-2 ಕೋ.ರೂ.)ಜಾಕ್‌ಪಾಟ್ ಹೊಡೆದಿದೆ. ಆಸ್ಟ್ರೇಲಿಯದ ಆಲ್‌ರೌಂಡರ್ 10.5 ಕೋ.ರೂ.ಗೆ ಹರಾಜಾದರು. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಬಿಡ್‌ನಲ್ಲಿ ಹಿಂದಿಕ್ಕಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮ್ಯಾಕ್ಸ್‌ವೆಲ್‌ರನ್ನು ಖರೀದಿಸಿತು. 2019ರ ಆವೃತ್ತಿಯ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳದ ಮ್ಯಾಕ್ಸ್‌ವೆಲ್ ಮುಂದಿನ ವರ್ಷ ಪಂಜಾಬ್ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್‌ನ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮೊರ್ಗನ್(ಮೂಲಬೆಲೆ-1.5 ಕೋ.ರೂ.)ಕೋಲ್ಕತಾ ನೈಟ್ ರೈಡರ್ಸ್‌ಗೆ 5.25 ಕೋ.ರೂ.ಗೆ ಹರಾಜಾಗಿ ಗಮನ ಸೆಳೆದರು. ವಿಶ್ವಕಪ್ ವಿಜೇತ ನಾಯಕ(50 ಓವರ್)ಮೊರ್ಗನ್ ಸೆಳೆಯಲು ಡೆಲ್ಲಿ ಹಾಗೂ ಕೆಕೆಆರ್ ಮಧ್ಯೆ ಬಿಡ್ಡಿಂಗ್ ವಾರ್ ನಡೆದಿತ್ತು. ಶಾರೂಕ್ ಖಾನ್ ಸಹ ಮಾಲಕತ್ವದ ಕೆಕೆಆರ್ ಅಂತಿಮವಾಗಿ ಮೊರ್ಗನ್‌ರನ್ನು ಖರೀದಿಸಲು ಯಶಸ್ವಿಯಾಯಿತು. ಆಸ್ಟ್ರೇಲಿಯದ ಬಿಗ್-ಹಿಟ್ಟಿಂಗ್ ಆಲ್‌ರೌಂಡರ್ ಕ್ರಿಸ್ ಲಿನ್‌ರನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮೂಲ ಬೆಲೆ 2 ಕೋ.ರೂ.ಗೆ ಖರೀದಿಸಿದೆ. ಹಿರಿಯ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪರನ್ನು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ 3 ಕೋ.ರೂ.ಗೆ ಖರೀದಿಸಿತು.
ಆ್ಯರೊನ್ ಫಿಂಚ್‌ರನ್ನು (ಮೂಲ ಬೆಲೆ-1.5 ಕೋ.ರೂ.)ಆರ್‌ಸಿಬಿ 4.40 ಕೋ.ರೂ. ನೀಡಿ ಖರೀದಿಸಿತು. ಚೇತೇಶ್ವರ ಪೂಜಾರ, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಕಾಲಿನ್ ಡಿ ಗ್ರಾಂಡ್‌ಹೋಮ್ ಹಾಗೂ ಹನುಮ ವಿಹಾರಿ ಆರಂಭಿಕ ಬಿಡ್ಡಿಂಗ್‌ನಲ್ಲಿ ಹರಾಜಾಗದೆ ಉಳಿದರು.
2020ರ ಐಪಿಎಲ್ ಟೂರ್ನಿಗೆ ಒಟ್ಟು 338 ಆಟಗಾರರು ಹರಾಜಿನ ಕಣದಲ್ಲಿದ್ದಾರೆ.