ದ್ವಿತೀಯ ಟೆಸ್ಟ್: ಶ್ರೀಲಂಕಾಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

Update: 2019-12-20 18:39 GMT

ಕರಾಚಿ, ಡಿ.20: ದಿನೇಶ್ ಚಾಂಡಿಮಾಲ್ ಸಿಡಿಸಿದ ಅರ್ಧಶತಕದ ಕೊಡುಗೆ ನೆರವಿನಿಂದ ಶ್ರೀಲಂಕಾ ತಂಡ ಆತಿಥೇಯ ಪಾಕಿಸ್ತಾನ ತಂಡದ ವಿರುದ್ಧದ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್ ನಲ್ಲಿ ಉತ್ತಮ ಮುನ್ನಡೆ ಸಾಧಿಸಿದೆ.

ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ಎರಡನೇ ದಿನದಾಟವಾದ ಶುಕ್ರವಾರ 74 ರನ್ ಗಳಿಸಿದ ಚಾಂಡಿಮಾಲ್ ಅವರು ಧನಂಜಯ ಡಿ’ಸಿಲ್ವಾ ಹಾಗೂ ದಿಲ್ರುವಾನ್ ಪೆರೇರ ಜೊತೆ ಅರ್ಧಶತಕಗಳ ಜೊತೆಯಾಟದಲ್ಲಿ ಭಾಗಿಯಾಗಿ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 271 ರನ್ ಗಳಿಸಲು ನೆರವಾದರು. ಈ ಮೂಲಕ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ 80 ರನ್ ಮುನ್ನಡೆ ಒದಗಿಸಿಕೊಟ್ಟರು.

 ಮೊದಲ ಇನಿಂಗ್ಸ್‌ನಲ್ಲಿ ಕೇವಲ 191 ರನ್‌ಗೆ ಆಲೌಟಾಗಿರುವ ಪಾಕ್ ತಂಡ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿದ್ದು, ಆರಂಭಿಕ ಆಟಗಾರರಾದ ಅಬಿದ್ ಅಲಿ(32) ಹಾಗೂ ಶಾನ್ ಮಸೂದ್(21)ಶ್ರೀಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.

ಇದಕ್ಕೂ ಮೊದಲು ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದ ಶಾಹೀನ್ ಅಫ್ರಿದಿ(5-77) ಹಾಗೂ ಮುಹಮ್ಮದ್ ಅಬ್ಬಾಸ್(4-55)ಶ್ರೀಲಂಕಾವನ್ನು 300 ರನ್ ಒಳಗೆ ನಿಯಂತ್ರಿಸಿದರು.

3 ವಿಕೆಟ್‌ಗಳ ನಷ್ಟಕ್ಕೆ 64 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡ ನೈಟ್ ವಾಚ್‌ಮ್ಯಾನ್ ಲಸಿತ್ ಎಂಬುಲ್ಡೆನಿಯಾ(13) ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(13) ವಿಕೆಟ್‌ಗಳನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು.

ಆಗ ಧನಂಜಯ ಡಿ’ಸಿಲ್ವಾ (32)ಜೊತೆ ಕೈಜೋಡಿಸಿದ ಚಾಂಡಿಮಾಲ್ ಆರನೇ ವಿಕೆಟ್‌ಗೆ 67 ರನ್ ಸೇರಿಸಿದರು. ಅಬ್ಬಾಸ್ ಎಸೆತದಲ್ಲಿ ಬೌಂಡರಿ ಗಳಿಸಿದ ಚಾಂಡಿಮಾಲ್ 18ನೇ ಅರ್ಧಶತಕ ಪೂರೈಸಿದರು. ಈ ಮೂಲಕ ಶ್ರೀಲಂಕಾವನ್ನು ಆಧರಿಸಿದರು.

ಬಲಗೈ ಬ್ಯಾಟ್ಸ್‌ಮನ್ ಚಾಂಡಿಮಾಲ್ 143 ಎಸೆತಗಳ ಇನಿಂಗ್ಸ್‌ನಲ್ಲಿ 10 ಬೌಂಡರಿಗಳನ್ನು ಗಳಿಸಿದರು. ಚಾಂಡಿಮಾಲ್ 48 ರನ್(84 ಎಸೆತ, 6 ಬೌಂಡರಿ,1 ಸಿಕ್ಸರ್) ಗಳಿಸಿದ ಪೆರೇರ ಅವರೊಂದಿಗೆ 7ನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಸೇರಿಸಿದರು. ಅಫ್ರಿದಿ ಮೂರು ಎಸೆತಗಳಲ್ಲಿ ಲಂಕಾದ ಕೊನೆಯ 2 ವಿಕೆಟ್‌ಗಳನ್ನು ಪಡೆದು ಲಂಕಾವನ್ನು 55.5 ಓವರ್‌ಗಳಲ್ಲಿ 271 ರನ್‌ಗೆ ಕಟ್ಟಿಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News