×
Ad

ವಾಡಾ ಡೋಪಿಂಗ್ ಉಲ್ಲಂಘನೆಯಲ್ಲಿ ಇಟಲಿ ಪ್ರಥಮ, ಭಾರತಕ್ಕೆ ಏಳನೇ ಸ್ಥಾನ

Update: 2019-12-21 00:25 IST

ಮಾಂಟ್ರಿಯಲ್, ಡಿ.20: ಅಂತರ್‌ರಾಷ್ಟ್ರೀಯ ಕ್ರೀಡೆಯಲ್ಲಿ ಡೋಪಿಂಗ್ ಪ್ರಕರಣಗಳು 2017ರಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಉದ್ದೀಪನಾ ಮದ್ದು ನಿಗ್ರಹ ಘಟಕ(ವಾಡಾ)ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗಪಡಿಸಿದೆ.

ವಾಡಾ ಡೋಪಿಂಗ್ ಉಲ್ಲಂಘನೆಯಲ್ಲಿ ಇಟಲಿ ಮೊದಲನೇ ಹಾಗೂ ಭಾರತ ಏಳನೇ ಸ್ಥಾನದಲ್ಲಿದೆ. 2017ರಲ್ಲಿ 1,804 ಉದ್ದೀಪನಾ ಮದ್ದು ನಿಗ್ರಹ ನಿಯಮದ ಉಲ್ಲಂಘನೆಯಾಗಿದೆ. 2016ರಲ್ಲಿ 1,595 ಪ್ರಕರಣಗಳು ವರದಿಯಾಗಿತ್ತು. 2017ರಲ್ಲಿ 93 ಕ್ರೀಡೆಗಳ 114 ಅಥ್ಲೀಟ್‌ಗಳು ಡೋಪಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಂಟ್ರಿಯಲ್ ಮೂಲದ ಏಜೆನ್ಸಿ ವರದಿ ಮಾಡಿದೆ.

ಇಟಲಿ ದೇಶದ 171 ಅಥ್ಲೀಟ್‌ಗಳು ಡೋಪಿಂಗ್‌ನಲ್ಲಿ ಭಾಗಿಯಾಗಿದ್ದು ವಾಡಾ ನಿಯಮ ಉಲ್ಲಂಘನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಫ್ರಾನ್ಸ್(128) ಹಾಗೂ ಅಮೆರಿಕ(103)ಉಳಿದೆರಡು ಸ್ಥಾನದಲ್ಲಿವೆ. ಬ್ರೆಝಿಲ್ 84 ಹಾಗೂ ರಶ್ಯದ ಅಥ್ಲೀಟ್‌ಗಳು 82 ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ರಶ್ಯ ದೇಶ 2020ರ ಟೋಕಿಯೊ ಒಲಿಂಪಿಕ್ಸ್ ಹಾಗೂ ಕತರ್‌ನಲ್ಲಿ ನಡೆಯುವ 2022ರ ವಿಶ್ವಕಪ್ ಸಹಿತ ಹಲವು ಪ್ರಮುಖ ಜಾಗತಿಕ ಟೂರ್ನಿಗಳಲ್ಲಿ ನಾಲ್ಕು ವರ್ಷಗಳ ಕಾಲ ಭಾಗವಹಿಸದಂತೆ ಡಿ.10ರಂದು ವಾಡಾ ನಿಷೇಧ ಹೇರಿತ್ತು.

ರಶ್ಯದಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ 2011 ಹಾಗೂ 2015ರಲ್ಲಿ ಭಾರೀ ಪ್ರಮಾಣದಲ್ಲಿ ಡೋಪಿಂಗ್ ಪ್ರಕರಣ ನಡೆದಿದೆ ಎಂದು ಮೂರು ವರ್ಷಗಳ ಹಿಂದೆ ಕ್ರೀಡಾ ವಕೀಲ ರಿಚರ್ಡ್ ಮೆಕ್‌ಲಾರೆನ್ ಸಲ್ಲಿಸಿದ್ದ ಸ್ವತಂತ್ರ ವರದಿಯಲ್ಲಿ ಬಹಿರಂಗವಾಗಿತ್ತು. ರಶ್ಯದ ಅಥ್ಲೀಟ್‌ಗಳನ್ನು 2016ರ ರಿಯೋ ಒಲಿಂಪಿಕ್ಸ್, 2017ರ ಲಂಡನ್ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2018ರ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸದಂತೆ ತಡೆ ಹೇರಲಾಗಿತ್ತು. ಚೀನಾ, ಭಾರತ, ಬೆಲ್ಜಿಯಂ, ಸ್ಪೇನ್ ಹಾಗೂ ದಕ್ಷಿಣ ಕೊರಿಯಾ ದೇಶಗಳು 2017ರಲ್ಲಿ ವಾಡಾ ಉದ್ದೀಪನ ಮದ್ದು ತಡೆ ನಿಯಮವನ್ನು ಉಲ್ಲಂಘಿಸಿರುವ ಪಟ್ಟಿಯಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿವೆ.

ಬಾಡಿ ಬಿಲ್ಡರ್‌ಗಳು ಡೋಪಿಂಗ್ ನಿಯಮ ಉಲ್ಲಂಘಿಸಿದರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. 266 ಬಾಡಿಬಿಲ್ಡರ್‌ಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಥ್ಲೀಟ್‌ಗಳು 242, ಸೈಕ್ಲಿಸ್ಟ್‌ಗಳು 218 ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಫುಟ್ಬಾಲ್ ಹಾಗೂ ರಗ್ಬಿ ಕ್ರಮವಾಗಿ 6ನೇ ಹಾಗೂ 8ನೇ ಸ್ಥಾನದಲ್ಲಿವೆ ಎಂದು ವರದಿಯಾಗಿದೆ.

2017ರಲ್ಲಿ ಉಲ್ಲಂಘನೆಯಾಗಿರುವ 1,459 ಪ್ರಕರಣಗಳು ಋಣಾತ್ಮಕ ಪರೀಕ್ಷೆಯ ಫಲಿತಾಂಶದ ಮೂಲಕವೇ ಬಂದಿವೆ. ಉಳಿದವುಗಳು ತನಿಖೆ ಹಾಗೂ ಗುಪ್ತಚರ ಮೂಲಗಳಿಂದ ಗೊತ್ತಾಗಿದೆ ಎಂದು ವಾಡಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News