×
Ad

ದ್ವಿತೀಯ ಟೆಸ್ಟ್: ಸತತ ಎರಡು ಶತಕ ಸಿಡಿಸಿದ ಆಬಿದ್ ಅಲಿ ಅಪರೂಪದ ಸಾಧನೆ

Update: 2019-12-21 15:51 IST

ಕರಾಚಿ, ಡಿ.21: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಆಬಿದ್ ಅಲಿ ಸತತ ಎರಡನೇ ಶತಕ ಸಿಡಿಸಿ ಅಪರೂಪದ ಸಾಧನೆ ಮಾಡಿದರು. ವೃತ್ತಿಜೀವನದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿದ ಬ್ಯಾಟ್ ್ಸಮನ್‌ಗಳ ಎಲೈಟ್ ಕ್ಲಬ್‌ಗೆ ಸೇರ್ಪಡೆಯಾದರು.

ಶನಿವಾರ ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ಅಲಿ ಈ ಸಾಧನೆ ಮಾಡಿದರು. ಆಫ್-ಸ್ಪಿನ್ನರ್ ಲಸಿತ್ ಎಂಬುಲ್ಡೇನಿಯಾ ಎಸೆತದಲ್ಲಿ ಎರಡು ರನ್ ಗಳಿಸಿದ 32ರ ಹರೆಯದ ಅಲಿ ಶತಕವನ್ನು ಪೂರೈಸಿದರು. ರಾವಲ್ಪಿಂಡಿಯಲ್ಲಿ ನಡೆದ ಡ್ರಾಗೊಂಡಿರುವ ಮೊದಲ ಟೆಸ್ಟ್‌ನಲ್ಲಿ ಅಲಿ 109 ರನ್ ಗಳಿಸಿದ್ದರು. ಈ ಮೂಲಕ ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಪುರುಷ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.

ಈ ವರ್ಷಾರಂಭದಲ್ಲಿ ದುಬೈನಲ್ಲಿ ಆಸ್ಟ್ರೇಲಿಯದ ವಿರುದ್ಧ ತಾನಾಡಿದ್ದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಅಲಿ 112 ರನ್ ಗಳಿಸಿದ್ದರು. ಅಲಿ ತಾನಾಡಿದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸತತ ಶತಕ ದಾಖಲಿಸಿದ ವಿಶ್ವದ 9ನೇ ಹಾಗೂ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತದ ಮುಹಮ್ಮದ್ ಅಝರುದ್ದೀನ್ ವೃತ್ತಿಜೀವನದ ಮೊದಲ ಮೂರು ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. 1984ರ ಡಿಸೆಂಬರ್‌ನಲ್ಲಿ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು.

ಆಸ್ಟ್ರೇಲಿಯದ ವಿಲಿಯಮ್ ಪೋನ್ಸ್‌ಫೋರ್ಡ್, ಡೌಗ್ ವಾಲ್ಟರ್ಸ್ ಹಾಗೂ ಗ್ರೆಗ್ ಬ್ಲೆವೆಟ್, ಭಾರತದ ಸೌರವ್ ಗಂಗುಲಿ ಹಾಗೂ ರೋಹಿತ್ ಶರ್ಮಾ, ವೆಸ್ಟ್‌ಇಂಡೀಸ್‌ನ ಅಲ್ವಿನ್ ಕಾಳಿಚರಣ್ ಹಾಗೂ ನ್ಯೂಝಿಲ್ಯಾಂಡ್‌ನ ಜಿಮ್ಮಿ ನೀಶಾಮ್ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News