ಸತತ ಆರನೇ ವರ್ಷ 50ನೇ ಗೋಲು ಗಳಿಸಿದ ಲಿಯೊನೆಲ್ ಮೆಸ್ಸಿ

Update: 2019-12-22 18:52 GMT

ಮ್ಯಾಡ್ರಿಡ್, ಡಿ.22: ಬಾರ್ಸಿಲೋನದ ಪರ ಗೋಲು ಗಳಿಸಿದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಸತತ ಆರನೇ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 50 ಗೋಲುಗಳನ್ನು ಪೂರೈಸಿದರು.

32ರ ಹರೆಯದ ಮೆಸ್ಸಿ ಶನಿವಾರ ಡೆಪೊರ್ಟಿವೊ ಅಲವೆಸ್ ತಂಡದ ವಿರುದ್ಧ ಕ್ಯಾಂಪ್‌ನೌನಲ್ಲಿ ನಡೆದ ಪಂದ್ಯದಲ್ಲಿ 69ನೇ ನಿಮಿಷದಲ್ಲಿ ಗೋಲು ಗಳಿಸಿ ಬಾರ್ಸಿಲೋನ ತಂಡ ಲಾಲಿಗ ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಇರಿಸಲು ನೆರವಾದರು.

 ಅರ್ಜೆಂಟೀನದ ಮುನ್ಪಡೆ ಆಟಗಾರ ಮೆಸ್ಸಿ ಫುಟ್ಬಾಲ್ ಕ್ಲಬ್ ಹಾಗೂ ತನ್ನ ದೇಶದ ಪರ ಆಡಿರುವ 58 ಪಂದ್ಯಗಳಲ್ಲಿ 50ನೇ ಗೋಲು ಗಳಿಸಿದರು. ಈ ವರ್ಷ ಆರನೇ ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿ ಜಯಿಸಿದ್ದ ಮೆಸ್ಸಿ 18 ಬಾರಿ ಗೋಲು ಗಳಿಸಲು ಸಹ ಆಟಗಾರರಿಗೆ ನೆರವಾಗಿದ್ದರು.

 ಮೆಸ್ಸಿ ಈ ವರ್ಷ 32 ಲಾಲಿಗ ಪಂದ್ಯಗಳಲ್ಲಿ 34 ಗೋಲು , ಚಾಂಪಿಯನ್ಸ್ ಲೀಗ್‌ನಲ್ಲಿ 8 ಹಾಗೂ ಕೋಪಾ ಡೆಲ್ ರೇನಲ್ಲಿ ಮೂರು ಗೋಲುಗಳನ್ನು ಗಳಿಸಿದ್ದಾರೆ. ಅರ್ಜೆಂಟೀನದ ಪರ ಈ ವರ್ಷ 10 ಪಂದ್ಯಗಳನ್ನು ಆಡಿದ್ದ ಮೆಸ್ಸಿ ಒಟ್ಟು ಐದು ಗೋಲು ಗಳಿಸಿದ್ದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು ಐವತ್ತು ಗೋಲು ದಾಖಲಿಸಿದ್ದಾರೆ.

 ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಮೆಸ್ಸಿ ಕಳೆದ 10 ವರ್ಷಗಳ ಅವಧಿಯಲ್ಲಿ 9 ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದರು. 2013ರಲ್ಲಿ ಮಾತ್ರ 45 ಗೋಲುಗಳನ್ನು ಗಳಿಸಿದ್ದರು. 2012ರಲ್ಲಿ ಒಟ್ಟು 91 ಗೋಲುಗಳನ್ನು ಗಳಿಸಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News