ಸಿರಿಯದ ಇದ್ಲಿಬ್‌ನಲ್ಲಿ ಸರಕಾರಿ ಪಡೆಗಳ ದಾಳಿ ತೀವ್ರ: 1.20 ಲಕ್ಷ ಮಂದಿ ಟರ್ಕಿಗೆ ಪಲಾಯನ
ಇಸ್ತಾಂಬುಲ್ (ಟರ್ಕಿ), ಡಿ. 24: ಸಿರಿಯದ ಸರಕಾರಿ ಪಡೆಗಳ ಆಕ್ರಮಣಕ್ಕೊಳಗಾಗಿರುವ ಇದ್ಲಿಬ್ ರಾಜ್ಯದಿಂದ ಟರ್ಕಿಗೆ ಪರಾರಿಯಾಗಿರುವವರ ಸಂಖ್ಯೆ 1,20,000ವನ್ನು ತಲುಪಿದೆ ಎಂದು ಟರ್ಕಿಯ ನೆರವು ಸಂಸ್ಥೆಯೊಂದು ಸೋಮವಾರ ತಿಳಿಸಿದೆ. ಕೆಲವು ಸಿರಿಯ ನಿರಾಶ್ರಿತರಿಗೆ ಶಿಬಿರವೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಅದು ಹೇಳಿದೆ.
ಸಿರಿಯದ ಬಂಡುಕೋರರೇ ಹೆಚ್ಚಾಗಿ ಇರುವ ಪ್ರಾಂತ ಇದ್ಲಿಬ್‌ನ್ನು ವಶಪಡಿಸಿಕೊಳ್ಳುವುದಾಗಿ ಸಿರಿಯ ಅಧ್ಯಕ್ಷ ಬಶರ್ ಅಸಾದ್ ಇತ್ತೀಚೆಗೆ ಘೋಷಿಸಿದ ಬಳಿಕ, ಸಿರಿಯ ಮತ್ತು ರಶ್ಯದ ಪಡೆಗಳು ಪ್ರಾಂತದಲ್ಲಿರುವ ಬಂಡುಕೋರರ ನೆಲೆಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿವೆ.
ಹೊಸದಾಗಿ ಟರ್ಕಿಗೆ ಬರುತ್ತಿರುವ ಸಿರಿಯ ನಿರಾಶ್ರಿತರನ್ನು ನಿಭಾಯಿಸಲು ಟರ್ಕಿಗೆ ಸಾಧ್ಯವಿಲ್ಲ ಎಂದು ಆ ದೇಶದ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ರವಿವಾರ ಹೇಳಿದ್ದಾರೆ. ವಾಯುವ್ಯ ಸಿರಿಯದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲದಿದ್ದರೆ, ಅಲ್ಲಿನ ಜನರ ಸಾಮೂಹಿಕ ವಲಸೆಯ ಪರಿಣಾಮವನ್ನು ಯುರೋಪಿಯನ್ ದೇಶಗಳೂ ಅನುಭವಿಸುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.
‘‘ಕಳೆದ ವಾರದಲ್ಲಿ, ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಇದ್ಲಿಬ್‌ನ ದಕ್ಷಿಣದ ಪ್ರದೇಶಗಳಿಂದ ಉತ್ತರಕ್ಕೆ ಪಲಾಯನಗೈಯುತ್ತಿರುವವರ ಸಂಖ್ಯೆ 1,20,000ವನ್ನು ತಲುಪಿದೆ’’ ಎಂದು ಹ್ಯುಮೇನಿಟೇರಿಯನ್ ರಿಲೀಫ್ ಫೌಂಡೇಶನ್ (ಐಎಚ್‌ಎಚ್) ತಿಳಿಸಿದೆ