ಯುಎಇಗಾಗಿ ಬೇಹುಗಾರಿಕೆ ನಡೆಸುತ್ತಿರುವ ಆರೋಪ: ಆ್ಯಪನ್ನು ಪ್ಲೇಸ್ಟೋರ್‌ ನಿಂದ ತೆಗೆದುಹಾಕಿದ ಗೂಗಲ್, ಆ್ಯಪಲ್

Update: 2019-12-24 16:15 GMT

ವಾಶಿಂಗ್ಟನ್, ಡಿ. 24: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಅಭಿವೃದ್ಧಿಪಡಿಸಲಾದ ಜನಪ್ರಿಯ ಮೊಬೈಲ್ ಆ್ಯಪ್ ಒಂದನ್ನು ಆ್ಯಪಲ್ ಮತ್ತು ಗೂಗಲ್ ‌ಗಳು ತಮ್ಮ ಆನ್‌ ಲೈನ್ ಮಾರುಕಟ್ಟೆಯಿಂದ ತೆಗೆದುಹಾಕಿವೆ. ಈ ಆ್ಯಪನ್ನು ವ್ಯಾಪಕವಾಗಿ ಸರಕಾರಿ ಬೇಹುಗಾರಿಕೆಗಾಗಿ ಬಳಸಲಾಗುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನ ಕಂಪೆನಿಗಳು ಈ ಕ್ರಮವನ್ನು ತೆಗೆದುಕೊಂಡಿವೆ.

   ‘ಟೊ ಟಾಕ್’ ಎಂಬ ಹೆಸರಿನ ಆ್ಯಪ್‌ನ್ನು ಮೊಬೈಲ್ ಫೋನ್ ‌ಗಳಲ್ಲಿ ಅಳವಡಿಸಿಕೊಂಡವರ ಸಂಭಾಷಣೆಗಳು, ಚಲನವಲನಗಳು ಮತ್ತು ಇತರ ವಿವರಗಳನ್ನು ತಿಳಿಯಲು ಯುಎಇ ಸರಕಾರಕ್ಕೆ ಸಾಧ್ಯವಾಗುತ್ತದೆ ಎಂಬುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದ ಬಳಿಕ ಗೂಗಲ್ ಮತ್ತು ಆ್ಯಪಲ್ ಕಂಪೆನಿಗಳು ಆ ಆ್ಯಪನ್ನು ತಮ್ಮ ವೇದಿಕೆಗಳಿಂದ ತೆಗೆದುಹಾಕಿವೆ.

ಈ ವಿಷಯದ ಬಗ್ಗೆ ಪರಿಶೀಲನೆ ನಡೆಯುವುದಕ್ಕೆ ಪೂರ್ವಭಾವಿಯಾಗಿ, ಆ್ಯಪನ್ನು ತನ್ನ ಆ್ಯಪ್‌ ಸ್ಟೋರ್‌ ನಿಂದ ತೆಗೆದುಹಾಕಲಾಗಿದೆ ಎಂದು ಆ್ಯಪಲ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. ಗೂಗಲ್ ನೀತಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಟೊ ಟಾಕ್ ಆ್ಯಪನ್ನು ಪ್ಲೇಸ್ಟೋರ್‌ನಿಂದ ತೆಗೆಯಲಾಗಿದೆ ಎಂದು ಗೂಗಲ್ ಹೇಳಿದೆ.

ಹೆಚ್ಚಿನ ಆನ್‌ಲೈನ್ ಚಟುವಟಿಕೆಗಳು ನಿಷಿದ್ಧವಾಗಿರುವ ದೇಶಗಳಲ್ಲಿ, ಸಂದೇಶಗಳು ಮತ್ತು ವೀಡಿಯೊಗಳನ್ನು ಕಳುಹಿಸುವ ಸುಲಭ ಮತ್ತು ಸುರಕ್ಷಿತ ವಿಧಾನವೆಂದು ಕಾಣುವಂತೆ ಈ ಆ್ಯಪನ್ನು ವಿನ್ಯಾಸೊಗೊಳಿಸಲಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

ಆದರೆ, ಈ ಆ್ಯಪನ್ನು ವ್ಯಾಪಕ ಕಣ್ಗಾವಲಿಗಾಗಿ ಯುಎಇ ಸರಕಾರ ಬಳಸುತ್ತಿದೆ ಎಂಬುದನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ಮತ್ತು ಓರ್ವ ಭದ್ರತಾ ಸಂಶೋಧಕ ಪತ್ತೆಹಚ್ಚಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಕೈಪ್ ಮತ್ತು ವಾಟ್ಸ್‌ಆ್ಯಪ್‌ನ ಸೇವೆಗಳಿಂದ ವಂಚಿತರಾಗಿರುವ ಯುಎಇ ನಾಗರಿಕರಿಗೆ ಟು ಟಾಕ್ ಉಚಿತ ಕರೆಗಳನ್ನು ಮಾಡುವ ಹಾಗೂ ಸಂದೇಶಗಳನ್ನು ಕಳುಹಿಸುವ ಅವಕಾಶವನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News