ಕಸ್ಟರ್ನ್ ದಾಖಲೆ ಸರಿಗಟ್ಟಿದ ಎಲ್ಗರ್

Update: 2019-12-27 04:09 GMT

► ಟೆಸ್ಟ್ ನಲ್ಲಿ ಮೊದಲ ಎಸೆತಕ್ಕೆ ಔಟಾದ ಆಫ್ರಿಕಾದ 4ನೇ ಬ್ಯಾಟ್ಸ್ ಮನ್

ಸೆಂಚೂರಿಯನ್, ಡಿ.26: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಡೀನ್ ಎಲ್ಗರ್ ಅವರು ಕಠಿಣ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಆದಾಗ್ಯೂ, ಗುರುವಾರ ಅವರ ಯಾವುದೇ ಅನುಭವ ಫಲ ನೀಡಲಿಲ್ಲ ಏಕೆಂದರೆ ಎಡಗೈ ಬ್ಯಾಟ್ಸ್ ಮನ್ ಆಟದ ಮೊದಲ ಎಸೆತದಲ್ಲಿ ಔಟಾಗಿ ಪೆವಿಲಿಯನ್ ಸೇರಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾದ ಇನಿಂಗ್ಸ್ ಆರಂಭಿಸಿದ ಡೀನ್ ಎಲ್ಗರ್ ಅವರು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್‌ರ ಮೊದಲ ಎಸೆತದಲ್ಲಿ ಚೆಂಡನ್ನು ರಕ್ಷಣಾತ್ಮಕವಾಗಿ ಎದುರಿಸಲು ಯತ್ನಿಸಿದರು. ಆದರೆ ಬ್ಯಾಟ್‌ನ್ನು ಸ್ಪರ್ಶಿಸಿದ ಚೆಂಡು ಹಿಂದಕ್ಕೆ ಹಾರಿತು. ವಿಕೆಟ್ ಕೀಪರ್ ಜೋಸ್ ಬಟ್ಲರ್ ಕ್ಯಾಚ್ ತೆಗದುಕೊಳ್ಳುವಲ್ಲಿ ಯಾವುದೇ ಯಡವಟ್ಟು ಮಾಡಲಿಲ್ಲ. ಚೆಂಡು ಸುರಕ್ಷಿತವಾಗಿ ಬಟ್ಲರ್ ಕೈ ಸೇರಿತು. ತನ್ನ 150ನೇ ಟೆಸ್ಟ್ ಆಡುತ್ತಿರುವ ಬೌಲರ್ ಆ್ಯಂಡರ್ಸನ್ ತಕ್ಷಣ ಮನವಿ ಮಾಡಿದರು ಮತ್ತು ಅಂಪೈರ್ ಕ್ರಿಸ್ ಗಫಾನಿ ಕೂಡ ಬೌಲರ್ ಪರವಾಗಿ ನಿರ್ಧಾರವನ್ನು ಪ್ರಕಟಿಸಿದರು.ಜೇಮ್ಸ್ ಆ್ಯಂಡರ್ಸನ್ ಈ ದಶಕದಲ್ಲಿ ಟೆಸ್ಟ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ 5 ನೇ ಬೌಲರ್ ಎನಿಸಿಕೊಂಡರು. ಎಲ್ಗರ್ ಮೊದಲ ಎಸೆತದಲ್ಲಿ ಔಟಾದ ದಕ್ಷಿಣ ಆಫ್ರಿಕಾದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಗ್ಯಾರಿ ಕರ್ಸ್ಟನ್ ಕೇಪ್‌ಟೌನ್‌ನಲ್ಲಿ ವೆಸ್ಟ್ ಇಂಡೀಸ್‌ನ ವೇಗಿ ಕರ್ಟ್ಲಿ ಆಂಬ್ರೋಸ್ ಅವರ ಮೊದಲ ಎಸೆತದಲ್ಲಿ ಔಟಾದ ಮೊದಲ ಬ್ಯಾಟ್ಸ್ ಮನ್. ಅವರ ಸಾಲಿಗೆ ಈಗ ಎಲ್ಗರ್ ಸೇರಿದ್ದಾರೆ. ಜಿಮ್ಮಿ ಕುಕ್ ಮತ್ತು ಎಡ್ಡಿ ಬಾರ್ಲೋ ಈ ಪಟ್ಟಿಯಲ್ಲಿರುವ ಇತರ ಇಬ್ಬರು ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು. ಒಟ್ಟಾರೆಯಾಗಿ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಎಲ್ಗರ್ ಮೊದಲ ಎಸೆತದಲ್ಲಿ ಔಟಾದ 32ನೇ ಬ್ಯಾಟ್ಸ್‌ಮನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News