×
Ad

400 ಟೆಸ್ಟ್ ವಿಕೆಟ್ ಪೂರೈಸಿದ ಸ್ಟುವರ್ಟ್ ಬ್ರಾಡ್

Update: 2019-12-27 09:42 IST

ಸೆಂಚೂರಿಯನ್, ಡಿ.26: ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಈ ದಶಕದಲ್ಲಿ 400 ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಗುರುವಾರ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಆರಂಭವಾದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬ್ರಾಡ್ ಈ ಮೈಲುಗಲ್ಲು ತಲುಪಿದರು. ಸಹ ಆಟಗಾರ ಜೇಮ್ಸ್ ಆ್ಯಂಡರ್ಸನ್ ಬಳಿಕ 400 ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು.

ಆತಿಥೇಯ ತಂಡದ ನಾಯಕ ಎಫ್‌ಡು ಪ್ಲೆಸಿಸ್(29) ವಿಕೆಟ್ ಪಡೆಯುವ ಮೂಲಕ ಬ್ರಾಡ್ ಈ ಮೈಲ್ಲುಗಲ್ಲು ತಲುಪಿದರು. ಆ್ಯಂಡರ್ಸನ್ ಈ ತನಕ 428 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ್ಯಶಸ್ ಸರಣಿಯ ಬಳಿಕ ಇಂಗ್ಲೆಂಡ್ ತಂಡಕ್ಕೆ ವಾಪಸಾಗಿರುವ ಆ್ಯಂಡರ್ಸನ್ ಇಂದು ತನ್ನ 150ನೇ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಡೀನ್ ಎಲ್ಗರ್ ವಿಕೆಟ್ ಉಡಾಯಿಸಿದರು.

ಆ್ಯಂಡರ್ಸನ್ ಹಾಗೂ ಬ್ರಾಡ್‌ರಲ್ಲದೆ, ಆಸ್ಟ್ರೇಲಿಯದ ನಥಾನ್ ಲಿಯೊನ್ ಈ ದಶಕದಲ್ಲಿ ಗರಿಷ್ಠ್ಠ ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ರಂಗನ ಹೆರಾತ್(363), ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(362)ಆ ಬಳಿಕದ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News