×
Ad

ರಿಷಿ, ಪ್ರಿಯಾಂಶು ಅರ್ಧಶತಕ: ಹಿಮಾಚಲ 235/7

Update: 2019-12-27 09:53 IST

ಮೈಸೂರು,ಡಿ.26: ಆಲ್‌ರೌಂಡರ್ ರಿಷಿ ಧವನ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಪ್ರಿಯಾಂಶು ಖಂಡೂರಿ ಅರ್ಧಶತಕಗಳ ಬೆಂಬಲದಿಂದ ಕರ್ನಾಟಕ ತಂಡದ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿದೆ. ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಮೊದಲ ದಿನದಾಟದಲ್ಲಿ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 166 ರನ್‌ಗೆ ನಿಯಂತ್ರಿಸಿದ್ದ ಹಿಮಾಚಲ ಪ್ರದೇಶ ಇದೀಗ 69 ರನ್ ಮುನ್ನಡೆಯಲ್ಲಿದೆ.

ಧವನ್(ಔಟಾಗದೆ 72,96 ಎಸೆತ, 7 ಬೌಂಡರಿ,3 ಸಿಕ್ಸರ್)ಕೆಳ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್‌ನ ಮೂಲಕ ತಂಡದ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸುವ ವಿಶ್ವಾಸ ಮೂಡಿಸಿದ್ದಾರೆ.

ಧವನ್‌ಗೆ ವಶಿಷ್ಟ(ಔಟಾಗದೆ 18)ಸಾಥ್ ನೀಡುತ್ತಿದ್ದು, ಈ ಜೋಡಿ 8ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 30 ರನ್ ಗಳಿಸಿದೆ.

ಎರಡನೇ ದಿನದಾಟವಾದ ಗುರುವಾರ 3 ವಿಕೆಟ್‌ಗಳ ನಷ್ಟಕ್ಕೆ 29 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹಿಮಾಚಲಪ್ರದೇಶಕ್ಕೆ ಆರಂಭಿಕ ಆಟಗಾರ ಪ್ರಿಯಾಂಶು ಖಂಡೂರಿ(69, 240 ಎಸೆತ, 8 ಬೌಂಡರಿ)ತಾಳ್ಮೆಯ ಅರ್ಧಶತಕದ ಮೂಲಕ ಆಸರೆಯಾದರು. ನೈಟ್‌ವಾಚ್‌ಮ್ಯಾನ್ ಮಾಯಾಂಕ್ ದಾಗಾರ್ ನಿನ್ನೆಯ ಸ್ಕೋರ್‌ಗೆ 3 ರನ್ ಸೇರಿಸಿ ಅಭಿಮನ್ಯು ಮಿಥುನ್‌ಗೆ ವಿಕೆಟ್ ಒಪ್ಪಿಸಿದರು. ಆಗ ನಿಖಿಲ್ ಗಂಗ್ಟಾ(46, 103ಎಸೆತ, 5 ಬೌಂಡರಿ,1ಸಿಕ್ಸರ್)ಅವರೊಂದಿಗೆ 5ನೇ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿದ ಪ್ರಿಯಾಂಶು ತಂಡದ ಮೊತ್ತವನ್ನು 122ಕ್ಕೆ ತಲುಪಿಸಿದರು. ಈ ಜೋಡಿಯನ್ನು ಸುಚಿತ್ ಬೇರ್ಪಡಿಸಲು ಯಶಸ್ವಿಯಾದರು.

ನಿಖಿಲ್ ಔಟಾದ ಬಳಿಕ ಧವನ್‌ರೊಂದಿಗೆ ಕೈಜೋಡಿಸಿದ ಪ್ರಿಯಾಂಶು 6ನೇ ವಿಕೆಟ್ ಜೊತೆಯಾಟದಲ್ಲಿ 75 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಪ್ರಿಯಾಂಶು ಹಾಗೂ ಅಂಕುಶ್ ಬೈನ್ಸ್(6)ಬೆನ್ನುಬೆನ್ನಿಗೆ ಔಟಾದರು. ಕರ್ನಾಟಕದ ಪರವಾಗಿ ವಿ.ಕೌಶಿಕ್(3-48)ಹಾಗೂ ಪ್ರತೀಕ್ ಜೈನ್(2-40)ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್

► ಕರ್ನಾಟಕ ಮೊದಲ ಇನಿಂಗ್ಸ್: 166

► ಹಿಮಾಚಲ ಪ್ರದೇಶ ಮೊದಲ ಇನಿಂಗ್ಸ್: 235/7

(ರಿಷಿ ಧವನ್ ಔಟಾಗದೆ 72, ಪ್ರಿಯಾಂಶು ಖಂಡೂರಿ 69, ನಿಖಿಲ್ ಗಂಗ್ಟಾ 46, ವಿ.ಕೌಶಿಕ್ 3-48,ಪ್ರತೀಕ್ ಜೈನ್ 2-40)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News