ಆಂಧ್ರ ವಿರುದ್ಧ ಪಶ್ಚಿಮ ಬಂಗಾಳ 289ಕ್ಕೆ ಆಲೌಟ್

Update: 2019-12-27 04:33 GMT

ಕೋಲ್ಕತಾ, ಡಿ. 26: ಆಂಧ್ರ ವಿರುದ್ಧ ರಣಜಿ ಟ್ರೋಫಿ ಗ್ರೂಪ್ ‘ಎ’ ಪಂದ್ಯದ ಎರಡನೇ ದಿನದ ಆಟವನ್ನು ಮಂದ ಬೆಳಕಿನ ಕಾರಣದಿಂದಾಗಿ ನಿಲ್ಲಿಸುವ ಮೊದಲು ಬಂಗಾಳ 289ಕ್ಕೆ ಆಲೌಟಾಗಿದೆ.

ಗುರುವಾರ ಮಧ್ಯಾಹ್ನ 1:35ಕ್ಕೆ 104 ಓವರ್‌ಗಳಲ್ಲಿ ಬಂಗಾಳ ಆಲೌಟಾಗುವ ಮೊದಲು ಮೂರು ಬಾರಿ ಆಟಕ್ಕೆ ಅಡ್ಡಿ ಉಂಟಾಗಿತ್ತು.

ಬಂಗಾಳ ಆಲೌಟಾದರೂ ಆಂಧ್ರ ಪ್ರದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮಂದ ಬೆಳಕಿನಿಂದಾಗಿ ಅಂತಿಮವಾಗಿ ಆಟವನ್ನು ನಿಲ್ಲಿಸಲಾಯಿತು. ಇಂದು ಕೇವಲ 101 ನಿಮಿಷಗಳಲ್ಲಿ 21 ಓವರ್‌ಗಳ ಆಟ ಸಾಧ್ಯವಾಯಿತು. ನಿನ್ನೆ 241ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಬಂಗಾಳ ತಂಡ ಬ್ಯಾಟಿಂಗ್ ಮುಂದುವರಿಸಿ 48 ರನ್ ಸೇರಿಸುವಷ್ಟರಲ್ಲಿ ಉಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.

112 ರನ್ ಗಳಿಸಿದ್ದ ಎಡಗೈ ಓಪನರ್ ಅಭಿಷೇಕ್ ರಾಮನ್ ದಿನದ ಎರಡನೇ ಎಸೆತದಲ್ಲಿ ಔಟಾದರು. ಅವರಿಗೆ ತನ್ನ ಖಾತೆಗೆ ಕೇವಲ ಎರಡು ರನ್ ಸೇರಿಸಲು ಸಾಧ್ಯವಾಯಿತು.

ಸ್ಟೀಫನ್ ಎಸೆತದಲ್ಲಿ ರಾಮನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬೆಳಗ್ಗೆ 9:27ಕ್ಕೆ ಆಟ ಆರಂಭಗೊಂಡಾಗ ಶಹಬಾಝ್ ಅಹ್ಮದ್ ಅವರನ್ನು ಸ್ಟೀಫನ್ ಪೆವಿಲಿಯನ್‌ಗೆ ಅಟ್ಟಿದರು. ಕಂಕಣ ಸೂರ್ಯಗ್ರಹಣದಿಂದಾಗಿ 20 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಲಾಗಿದ್ದರೂ, ಆಟ ಮತ್ತೆ 2 ಗಂಟೆ ತಡವಾಗಿ ಆರಂಭಗೊಂಡಿತು.

 ಬಂಗಾಳ ಕೇವಲ 9 ರನ್ ಸೇರಿಸುವಷ್ಟರ ಹೊತ್ತಿಗೆ ಕೊನೆಯ ವಿಕೆಟ್‌ಗಳನ್ನು ಕಳೆದುಕೊಂಡಿತು.

‘‘ಅಲ್ಲಿ ಬ್ಯಾಟಿಂಗ್ ಕಠಿಣವಾಗಿತ್ತು. ನಾವು 350 ತಲುಪುವ ಆಶಯದಲ್ಲಿದ್ದೆವು. ಆದರೆ ದಿನದ ಮೊದಲ ಓವರ್‌ನಲ್ಲಿ ನಾವು ರಾಮನ್ ಅವರನ್ನು ಕಳೆದುಕೊಂಡೆವು ಮತ್ತು ನಡುವೆ ಆಗಾಗ ಅಡೆತಡೆಗಳು ಎದುರಾಗುತ್ತಿದ್ದವು. ನಮಗೆ ಬೌಲಿಂಗ್ ಮಾಡಲು ಸಹ ಆಗಲಿಲ್ಲ’’ಎಂದು ಬಂಗಾಳದ ತರಬೇತುದಾರ ಅರುಣ್ ಲಾಲ್ ಹೇಳಿದ್ದಾರೆ.

ಅಶಿಸ್ತಿನ ಕಾರಣದಿಂದಾಗಿ ಅಮಾನತುಗೊಂಡಿರುವ ಬಂಗಾಳದ ವೇಗದ ಬೌಲರ್ ಅಶೋಕ್ ದಿಂಡಾ ತಂಡದ ಸೇವೆಗೆ ಲಭ್ಯವಿಲ್ಲ. ಹೀಗಿದ್ದರೂ ಉಳಿದ ಬೌಲರ್‌ಗಳು ಚೆನ್ನಾಗಿ ಬೌಲಿಂಗ್ ದಾಳಿ ನಡೆಸಲಿದ್ದಾರೆಂಬ ಬಗ್ಗೆ ಲಾಲ್ ವಿಶ್ವಾಸ ವ್ಯಕ್ತಪಡಿಸಿದರು. 289 ಸಾಧಾರಣ ಮೊತ್ತ ಎಂದು ಹೇಳಿದರು.

‘‘ನಾವು ತುಂಬಾ ಸಕಾರಾತ್ಮಕವಾಗಿದ್ದೇವೆ, ಇಲ್ಲಿ ಬ್ಯಾಟಿಂಗ್ ಸುಲಭವಲ್ಲ. ಇದಕ್ಕೆ ಉತ್ತಮ ತಂತ್ರಗಾರಿಕೆ ಮತ್ತು ಏಕಾಗ್ರತೆಯ ಅಗತ್ಯವಿರುತ್ತದೆ. ಆದರೂ ನಾವು ತ್ವರಿತವಾಗಿ ವಿಕೆಟ್ ಪಡೆದರೆ ನಮಗೆ ಅನುಕೂಲವಾಗಬಹುದು. ನಾವು ಪೂರ್ಣ ದಿನಗಳನ್ನು ಆಡಲು ಸಮರ್ಥರಾಗಿದ್ದೇವೆ’’ ಎಂದು ಅವರು ಹೇಳಿದರು.

► ಒಡಿಶಾಕ್ಕೆ ಮುನ್ನಡೆ: ಗ್ರೂಪ್ ‘ಸಿ’ ಯಲ್ಲಿ ಆರಂಭಿಕ ಆಟಗಾರ ಶಂತನು ಮಿಶ್ರಾ ಅಜೇಯರಾಗಿ 54 ರನ್ ಗಳಿಸಿ ಒಡಿಶಾ ತಂಡಕ್ಕೆ ಉತ್ತರಾಖಂಡದ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ಸಹಾಯ ಮಾಡಿದರು.

  ಮೊದಲ ದಿನ 3 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸಿದ್ದ ಒಡಿಶಾ ದಿನದ ಮೂರನೇ ಓವರ್‌ನಲ್ಲಿ ಪ್ರದೀಪ್ ಚಮೋಲಿ (36ಕ್ಕೆ 2) ದಾಳಿಗೆ ಸಿಲುಕಿ ಬಿಪ್ಲಾಬ್ ಸಮಂತ್ರೇ (37) ಅವರನ್ನು ಕಳೆದುಕೊಂಡಿತು.ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ ಮಿಶ್ರಾ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರು. ಅವರು ಔಟಾಗದೆ 54 ರನ್ ಗಳಿಸಿದರು. ಉತ್ತರಾಖಂಡದ ಮೊದಲ ಇನಿಂಗ್ಸ್ ನಲ್ಲಿ ಒಟ್ಟು 117 ರನ್‌ಗಳಿಗೆ ಆಲೌಟಾಗಿತ್ತು. ಒಡಿಶಾ ಇದೀಗ 6 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿ 28 ರನ್‌ಗಳ ಮುನ್ನಡೆ ಸಾಧಿಸಿದೆ.

►   ಸರ್ವಿಸಸ್‌ಗೆ ಮುನ್ನಡೆ : ಹೊಸದಿಲ್ಲಿಯ ಪಾಲಂ ಎ ಸ್ಟೇಡಿಯಂನಲ್ಲಿ ತ್ರಿಪುರಾ ತಂಡ ಮಧ್ಯಮ ವೇಗಿ ಮಣಿಶಂಕರ್ ಮುರಸಿಂಗ್(63ಕ್ಕೆ 7) ನೆರವಿನಲ್ಲಿ ಸರ್ವಿಸಸ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 173ಕ್ಕೆ ಆಲೌಟ್ ಮಾಡಿದೆ. ದಿನದಾಟದಂತ್ಯಕ್ಕೆ ತ್ರಿಪುರಾ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 16 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್

►  ಕಟಕ್: ಉತ್ತರಾಖಂಡ ಮೊದಲ ಇನಿಂಗ್ಸ್ 117, ಒಡಿಶಾ ಮೊದಲ ಇನಿಂಗ್ಸ್: 55.2 ಓವರ್‌ಗಳಲ್ಲಿ 145/6; (ಶಾಂತನು ಮಿಶ್ರಾ ಬ್ಯಾಟಿಂಗ್ 54).

► ಜಮ್ಶೆಡ್ಪುರ: ಜಾರ್ಖಂಡ್ ವಿರುದ್ಧ ಹರ್ಯಾಣ 91 ಓವರ್‌ಗಳಲ್ಲಿ 285/6 (ಸಿ. ಬಿಷ್ಣೋಯ್ ಬ್ಯಾಟಿಂಗ್ 75 , ಅಂಕಿತ್ ಕುಮಾರ್ 53, ಶಿವಂ ಚೌಹಾಣ್ 53, ಹರ್ಷಲ್ ಪಟೇಲ್ ಬ್ಯಾಟಿಂಗ್ 47).

► ದಿಲ್ಲಿ: ತ್ರಿಪುರಾ ಮೊದಲ ಇನಿಂಗ್ಸ್: 126 ಮತ್ತು ಎರಡನೇ ಇನಿಂಗ್ಸ್ 8 ಓವರ್‌ಗಳಲ್ಲಿ 16/1; ಸರ್ವಿಸಸ್ ಮೊದಲ ಇನಿಂಗ್ಸ್ 53.3 ಓವರ್‌ಗಳಲ್ಲಿ ಆಲೌಟ್ 173; (ಅರ್ಜುನ್ ಶರ್ಮಾ 54; ಮಣಿಶಂಕರ್ ಮುರಸಿಂಗ್ 63ಕ್ಕೆ 7).

► ಜಮ್ಮು: ಅಸ್ಸಾಂ ವಿರುದ್ಧ ಜಮ್ಮು ಮತ್ತು ಕಾಶ್ಮೀರ 52 ಓವರ್‌ಗಳಲ್ಲಿ 210/2(ಶುಭಮ್ ಖಜುರಿಯಾ ಬ್ಯಾಟಿಂಗ್ 87 , ಸೂರ್ಯಾಂಶು ರೈನಾ 73).

► ಪುಣೆ: ಮಹಾರಾಷ್ಟ್ರ ಮೊದಲ ಇನಿಂಗ್ಸ್: 289 (ಋತುರಾಜ್ ಗಾಯಕವಾಡ್ 108, ವಿಶಾಂತ್ ಮೋರ್ 53; ವೀರ್ ಪ್ರತಾಪ್ ಸಿಂಗ್ 80ಕ್ಕೆ 5). ಛತ್ತೀಸ್‌ಗಢ ಮೊದಲ ಇನಿಂಗ್ಸ್: 47 ಓವರ್‌ಗಳಲ್ಲಿ 131/3 (ಹರ್ಪ್ರೀತ್ ಸಿಂಗ್ ಬ್ಯಾಟಿಂಗ್ 59 ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News