×
Ad

ಬಾಕ್ಸಿಂಗ್ ಡೇ ಟೆಸ್ಟ್: ಸುಸ್ಥಿತಿಯಲ್ಲಿ ಆಸ್ಟ್ರೇಲಿಯ

Update: 2019-12-27 10:20 IST

ಮೆಲ್ಬೋರ್ನ್, ಡಿ.26: ನ್ಯೂಝಿಲ್ಯಾಂಡ್ ವಿರುದ್ಧ ದ್ವಿತೀಯ ಟೆಸ್ಟ್‌ನ ಮೊದಲ ದಿನ ಆಸ್ಟ್ರೇಲಿಯ ಸುಸ್ಥಿತಿಯಲ್ಲಿದ್ದು, ಮಾಸ್ಟರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಔಟಾಗದೆ 77 ರನ್ ಗಳಿಸುವುದರೊಂದಿಗೆ 27ನೇ ಶತಕದತ್ತ ದಾಪುಗಾಲಿಟ್ಟಿದ್ದಾರೆ.

ಕ್ರಿಸ್ಮಸ್ ಮರುದಿನ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲ್ಪಡುವ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆಸ್ಟ್ರೇಲಿಯ 90 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 257 ರನ್ ಗಳಿಸಿದೆ.ಲ್ಯಾಬುಶೆನ್(63) ಹಾಗೂ ಸ್ಟೀವ್ ಸ್ಮಿತ್(ಔಟಾಗದೆ 77)ಅರ್ಧಶತಕಗಳ ಕೊಡುಗೆ ನೀಡಿದ್ದಾರೆ.

ಕಿವೀಸ್ 1987ರ ಬಳಿಕ ಮೊದಲ ಬಾರಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಆಸೀಸ್‌ನ ಆರಂಭಿಕ ಆಟಗಾರ ಜೋ ಬರ್ನ್ಸ್(0)ವಿಕೆಟನ್ನು ಇನಿಂಗ್ಸ್‌ನ ಮೊದಲ ಓವರ್‌ನ 4ನೇ ಎಸೆತದಲ್ಲಿ ಉಡಾಯಿಸಿದ ಟ್ರೆಂಟ್ ಬೌಲ್ಟ್ ನಾಯಕ ವಿಲಿಯಮ್ಸನ್ ಮೊದಲು ಬೌಲಿಂಗ್ ಮಾಡಿದ್ದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆಗ ಜೊತೆಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್(41, 64 ಎಸೆತ, 3 ಬೌಂಡರಿ)ಹಾಗೂ ಲ್ಯಾಬುಶೆನ್ 2ನೇ ವಿಕೆಟ್‌ಗೆ 60 ರನ್ ಸೇರಿಸಿ ತಂಡವನ್ನು ಆಧರಿಸಿದರು. ಆದರೆ ವಾರ್ನರ್ ಭೋಜನ ವಿರಾಮಕ್ಕೆ ಮೊದಲು ವಿಕೆಟ್ ಒಪ್ಪಿಸಿದರು.ವಾಗ್ನರ್ ಬೌಲಿಂಗ್‌ನಲ್ಲಿ ಸೌಥಿ ಒಂದೇ ಕೈಯಲ್ಲಿ ಪಡೆದ ಅಮೋಘ ಕ್ಯಾಚ್‌ಗೆ ಔಟಾದರು.

 ಈ ವರ್ಷ ವಿಶ್ವದ ಶ್ರೇಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿರುವ ಲ್ಯಾಬುಶೆನ್ ಹಾಗೂ ಸ್ಮಿತ್ 3 ನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿದರು. ಸತತ ಐದನೇ ಅರ್ಧಶತಕ ಗಳಿಸಿ ದೊಡ್ಡ ಸ್ಕೋರ್ ಗಳಿಸುವತ್ತ ಗಮನ ಹರಿಸಿದ್ದ ಲ್ಯಾಬುಶೆನ್‌ಗೆ ಕಾಲಿನ್ ಡಿ ಗ್ರಾಂಡ್‌ಹೋಮ್

(2-48)ಪೆವಿಲಿಯನ್ ಹಾದಿ ತೋರಿಸಿದರು. ಲ್ಯಾಬುಶೆನ್ ಇತ್ತೀಚೆಗೆ ಮೂರು ಶತಕ ಸಿಡಿಸಿ ಮಿಂಚಿದ್ದರು. ಲ್ಯಾಬುಶೆನ್ ಔಟಾದ ಬಳಿಕ ಮ್ಯಾಥ್ಯೂ ವೇಡ್ ಜೊತೆ ಕೈಜೋಡಿಸಿದ ಸ್ಮಿತ್ 4ನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಕಲೆಹಾಕಿದರು. ವೇಡ್ ವಿಕೆಟ್ ಪಡೆದ ಗ್ರಾಂಡ್‌ಹೋಮ್ ಈ ಜೋಡಿಯನ್ನು ಬೇರ್ಪಡಿಸಿದರು.

 ದಿನದಾಟದಂತ್ಯಕ್ಕೆ ಸ್ಮಿತ್ ಹಾಗೂ ಹೆಡ್(ಔಟಾಗದೆ 25, 56 ಎಸೆತ, 3 ಬೌಂಡರಿ)ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 41 ರನ್ ಸೇರಿಸಿ ತಂಡವನ್ನು ಆಧರಿಸಿದ್ದಾರೆ. ಸ್ಮಿತ್ (ಔಟಾಗದೆ 77,192 ಎಸೆತ, 8 ಬೌಂಡರಿ,1 ಸಿಕ್ಸರ್)103 ಎಸೆತಗಳಲ್ಲಿ 28ನೇ ಅರ್ಧಶತಕ ಗಳಿಸಿದ್ದಾರೆ. 38 ರನ್ ಗಳಿಸಿದ್ದಾಗ ಲಭಿಸಿದ ಜೀವದಾನದ ಲಾಭ ಪಡೆದಿರುವ ಸೂಪರ್‌ಸ್ಟಾರ್ ಸ್ಮಿತ್ ಇದೀಗ ಮತ್ತೊಂದು ಶತಕದತ್ತ ಹೆಜ್ಜೆ ಇಟ್ಟಿದ್ದಾರೆ. ಎಂಸಿಜಿಯಲ್ಲಿ ಸ್ಮಿತ್ ಕಳೆದ 4 ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ್ದಾರೆ.

ಆಸ್ಟ್ರೇಲಿಯದ ಅಗ್ರ-10 ಟೆಸ್ಟ್ ರನ್ ಸ್ಕೋರರ್‌ಗಳ ಪಟ್ಟಿಗೆ ಸ್ಮಿತ್ ಸೇರ್ಪಡೆ

ಆಸ್ಟ್ರೇಲಿಯದ ಸಾರ್ವಕಾಲಿಕ ಶ್ರೇಷ್ಠ ಅಗ್ರ-10 ರನ್ ಸ್ಕೋರರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಗುರುವಾರ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ನ ಮೊದಲ ದಿನ ಸ್ಮಿತ್ ಈ ಸಾಧನೆ ಮಾಡಿದರು. 51ನೇ ಓವರ್‌ನಲ್ಲಿ ಒಂದು ರನ್ ಗಳಿಸಿದ ಸ್ಮಿತ್ ಮಾಜಿ ಟೆಸ್ಟ್ ನಾಯಕ ಗ್ರೆಗ್ ಚಾಪೆಲ್(7,110 ರನ್)ದಾಖಲೆಯನ್ನು ಹಿಂದಿಕ್ಕಿದರು. ಈ ಮೂಲಕ ಆಸ್ಟ್ರೇಲಿಯದ ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ ಆಸ್ಟ್ರೇಲಿಯ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ಸ್ಕೋರರ್ ಆಗಿದ್ದಾರೆ. ಅಲನ್ ಬಾರ್ಡರ್(156 ಟೆಸ್ಟ್, 11,174 ರನ್), ಸ್ಟೀವ್ ವಾ(168 ಪಂದ್ಯ,10,927 ರನ್) ಹಾಗೂ ಮಿಚೆಲ್ ಕ್ಲಾರ್ಕ್(115 ಪಂದ್ಯ, 8,643 ರನ್)ಬಳಿಕದ ಸ್ಥಾನದಲ್ಲಿದ್ದಾರೆ. ಒಟ್ಟಾರೆ, ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ತೆಂಡುಲ್ಕರ್ ಭಾರತ ಪರ 200 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, ಒಟ್ಟು 15,921 ರನ್ ಗಳಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್; ಮೊದಲ ದಿನ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರ್

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ಗುರುವಾರ ಆರಂಭವಾದ ಆತಿಥೇಯ ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ಗೆ 80,000ಕ್ಕೂ ಅಧಿಕ ಪ್ರೇಕ್ಷಕರು ಹಾಜರಾಗಿದ್ದಾರೆ. ಇದೇ ಮೊದಲ ಬಾರಿ ಉಭಯ ದೇಶಗಳ ಟೆಸ್ಟ್ ಪಂದ್ಯದ ಮೊದಲ ದಿನ ಇಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರಾಗಿದ್ದಾರೆ. ಆಸ್ಟ್ರೇಲಿಯದ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ಗೆ ತನ್ನದೇ ಆದ ಮಹತ್ವವಿದೆ.ಸಾಮಾನ್ಯವಾಗಿ ಈ ಪಂದ್ಯ ಹೆಚ್ಚಿ ನ ಪ್ರೇಕ್ಷಕರನ್ನು ಸೆಳೆಯುತ್ತದೆ. 2013ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ಗೆ 91,112 ಪ್ರೇಕ್ಷಕರು ಸಾಕ್ಷಿಯಾಗಿದ್ದು, ಇದೊಂದು ದಾಖಲೆಯಾಗಿ ಉಳಿದಿದೆ. ಗುರುವಾರ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನ 80,473 ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದರು. ಸಾಮಾನ್ಯವಾಗಿ ಇಂಗ್ಲೆಂಡ್-ಆಸ್ಟ್ರೇಲಿಯ ಮಧ್ಯೆ ನಡೆಯುವ ಆ್ಯಶಸ್ ಸರಣಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರಾಗುತ್ತಾರೆ.ಇದೀಗ ಎರಡನೇ ಬಾರಿ ಇತರ ತಂಡದ ವಿರುದ್ಧ ಪಂದ್ಯದಲ್ಲಿ ಇಷ್ಟೊಂದು ಪ್ರೇಕ್ಷಕರು ಹಾಜರಾಗಿದ್ದಾರೆ. 1975ರಲ್ಲಿ ವೆಸ್ಟ್‌ಇಂಡೀಸ್-ಆಸ್ಟ್ರೇಲಿಯ ಮಧ್ಯೆ ನಡೆದಿದ್ದ ಟೆಸ್ಟ್ ಪಂದ್ಯಕ್ಕೆ 85,661 ಮಂದಿ ಪ್ರೇಕ್ಷಕರು ಸಾಕ್ಷಿಯಾಗಿದ್ದರು. ನ್ಯೂಝಿಲ್ಯಾಂಡ್ 1987ರ ಬಳಿಕ ಮೊದಲ ಬಾರಿ ಆಸ್ಟ್ರೇಲಿಯ ನೆಲದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ''ಇಂದು ಎಂಸಿಜಿಯಲ್ಲಿ ಇತಿಹಾಸ ನಿರ್ಮಿಸಿರುವ ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್‌ನ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸುವೆ. ಉಭಯ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗಿದೆ''ಎಂದು ಕ್ರಿಕೆಟ್ ಆಸ್ಟ್ರೇಲಿಯ ಮುಖ್ಯಸ್ಥ ಕೆವಿನ್ ರಾಬರ್ಟ್ಸ್ ತಿಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

► ಆಸ್ಟ್ರೇಲಿಯ ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 257/4

(ಸ್ಟೀವ್ ಸ್ಮಿತ್ ಔಟಾಗದೆ 77, ಲ್ಯಾಬುಶೆನ್ 63, ವಾರ್ನರ್ 41, ಮ್ಯಾಥ್ಯೂ ವೇಡ್ 38, ಹೆಡ್ ಔಟಾಗದೆ 25, ಗ್ರಾಂಡ್‌ಹೋಮ್ 2-48)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News