ಹಿಮಾ ದಾಸ್, ನೀರಜ್ ಚೋಪ್ರಾ ಸಾಧನೆಗೆ ಅಡ್ಡಿಯಾದ ಗಾಯದ ಸಮಸ್ಯೆ!

Update: 2019-12-27 05:11 GMT

ಹೊಸದಿಲ್ಲಿ, ಡಿ.26: ಭಾರತೀಯ ಅಥ್ಲೆಟಿಕ್ಸ್‌ನ ಇಬ್ಬರು ಸ್ಟಾರ್‌ಗಳಾದ ನೀರಜ್ ಚೋಪ್ರಾ ಹಾಗೂ ಹಿಮಾ ದಾಸ್ ಈ ವರ್ಷ ಗಾಯದ ಸಮಸ್ಯೆಯಿಂದಾಗಿ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಲಾಗದೇ ನಿರಾಸೆ ಅನುಭವಿಸಿದರು. ಅಥ್ಲೆಟಿಕ್ಸ್‌ನಲ್ಲಿ ಡೋಪಿಂಗ್ ಹಾಗೂ ವಯೋಮಿತಿಯ ವಿವಾದವೂ ಕೇಳಿಬಂತು.

ಅಥ್ಲೀಟ್‌ಗಳ ನಿರಾಶಾದಾಯಕ ಪ್ರದರ್ಶನದ ನಡುವೆಯೂ ದ್ಯುತಿ ಚಂದ್ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನ 100 ಮೀ. ಸ್ಪರ್ಧೆಯನ್ನು ಜಯಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಂಡರು. ಈ ಮೂಲಕ ಇತಿಹಾಸ ನಿರ್ಮಿಸಿದರು.

ಮಿಕ್ಸೆಡ್ 4-400 ಮೀ. ರಿಲೇ ಹಾಗೂ ಪುರುಷರ 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆ(ಅವಿನಾಶ್ ಸಬ್ಲೆ)ಯಲ್ಲಿ ಭಾರತ 2020ರ ಒಲಿಂಪಿಕ್ ಗೇಮ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.2016ರಲ್ಲಿ ಕಾಮನ್‌ವೆಲ್ತ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿ ಬೆಳಕಿಗೆ ಬಂದಿದ್ದ ನೀರಜ್ ಚೋಪ್ರಾ 2018ರಲ್ಲಿ ವಿಶ್ವದರ್ಜೆಯ ಜಾವೆಲಿನ್ ಎಸೆತಗಾರನಾಗಿ ಮೂಡಿಬಂದಿದ್ದರು. ಆದರೆ, 22ರ ವಯಸ್ಸಿನ ಚೋಪ್ರಾಗೆ ಈ ವರ್ಷ ಪಾಟಿಯಾಲದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವರ್ಷದ ಮೇನಲ್ಲಿ ಬಲಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಹೀಗಾಗಿ ಅವರು ದೋಹಾದಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಯಾವುದೇ ಪ್ರಯತ್ನ ನಡೆಸಲಿಲ್ಲ. ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿಲ್ಲ.

ಜೂನಿಯರ್ ವಿಶ್ವ ಚಾಂಪಿಯನ್ ಓಟಗಾರ್ತಿ ಹಿಮಾ ದಾಸ್ ವರ್ಷದ ಆರಂಭದಲ್ಲಿ ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 2018ರ ಏಶ್ಯನ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಬೆನ್ನುನೋವು ಈ ವರ್ಷ ಮತ್ತೆ ಬಾಧಿಸಿತು. ಯುರೋಪ್‌ನಲ್ಲಿ ತರಬೇತಿ ಪಡೆದಿದ್ದ ಹಿಮಾ, ಝೆಕ್ ಗಣರಾಜ್ಯ ಹಾಗೂ ಪೊಲ್ಯಾಂಡ್‌ನಲ್ಲಿ ಸತತ ಆರು ಚಿನ್ನದ ಪದಕಗಳನ್ನು ಜಯಿಸಿ ಮಿಂಚಿದ್ದರು. 19ರ ಹರೆಯದ ‘ದಿಂಗ್ ಎಕ್ಸ್‌ಪ್ರೆಸ್’ಖ್ಯಾತಿಯ ದಾಸ್ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಓಟವನ್ನು ಪೂರ್ಣಗೊಳಿಸುವ ಮೊದಲೇ ಸ್ಪರ್ಧೆಯಿಂದ ಹೊರಗುಳಿದಿದ್ದರು. ವಿಶ್ವ ಚಾಂಪಿಯನ್‌ಶಿಪ್ ತಂಡದಲ್ಲಿ ದಾಸ್ ಸ್ಥಾನ ಪಡೆದಿದ್ದರು. ಆದರೆ,ಕೊನೆಯ ಕ್ಷಣದಲ್ಲಿ ಭಾರತದ ಅಥ್ಲೆಟಿಕ್ಸ್ ಒಕ್ಕೂಟ ದಾಸ್ ಹೆಸರನ್ನು ಕೈಬಿಟ್ಟಿತ್ತು.

ಎಂದಿನಂತೆ ಡೋಪಿಂಗ್ ಪ್ರಕರಣವು ಅಥ್ಲೆಟಿಕ್ಸ್ ಗೆ ಹಿನ್ನಡೆವುಂಟು ಮಾಡಿದ್ದು, ಓಟಗಾರ್ತಿ ಗೋಮತಿ ಮಾರಿಮುತ್ತು ಡೋಪಿಂಗ್‌ನಲ್ಲಿ ಸಿಲುಕಿಹಾಕಿಕೊಂಡರು. ಹೀಗಾಗಿ ಅವರು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಜಯಿಸಿದ್ದ ಚಿನ್ನದ ಪದಕವನ್ನು ಹಿಂದಕ್ಕೆ ಪಡೆಯಲಾಗಿತ್ತು.

 ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಸಂಜೀವನಿ ಜಾಧವ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ತಾತ್ಕಾಲಿಕವಾಗಿ ಅಮಾನತುಗೊಂಡರು. ಶಾಟ್‌ಪುಟ್ ತಾರೆ ಮನ್‌ಪ್ರೀತ್ ಕೌರ್‌ರನ್ನು 2017ರಲ್ಲಿ ನಾಲ್ಕು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ)ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿತ್ತು.

ಅಥ್ಲೆಟಿಕ್ಸ್‌ನಲ್ಲಿ ಈ ವರ್ಷ ಸುಮಾರು 20 ಡೋಪಿಂಗ್ ಪ್ರಕರಣಗಳು ದಾಖಲಾಗಿದ್ದವು.

ವಯೋಮಿತಿ ವಿವಾದ ಈ ವರ್ಷವೂ ಮುಂದುವರಿದಿದ್ದು, 51 ಯುವಕರು ತಪ್ಪು ವಯಸ್ಸು ನೀಡಿದ ಆರೋಪ ಎದುರಿಸಿದ್ದರು. ಭಾರತ ಮೂರು ಸ್ಪರ್ಧೆಗಳಾದ ಮಿಕ್ಸೆಡ್ 4-400 ಮೀ. ರಿಲೇ, ಪುರುಷರ 3,000 ಮೀ. ಸ್ಟೀಪಲ್‌ಚೇಸ್ ಹಾಗೂ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಫೈನಲ್‌ಗೆ ತಲುಪಿತ್ತು. ಈ ಪೈಕಿ 3000 ಮೀ. ಸ್ಟೀಪಲ್‌ಚೇಸರ್ ಅವಿನಾಶ್ ಸಬ್ಲೆ ಹಾಗೂ ಮಿಕ್ಸೆಡ್ 4-400 ಮೀ. ರಿಲೇ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News