×
Ad

ರೈಲ್ವೇಸ್ ವಿರುದ್ಧ ಮುಗ್ಗರಿಸಿದ ಮುಂಬೈ

Update: 2019-12-28 14:49 IST

ಮುಂಬೈ, ಡಿ.27: ದೇಶೀಯ ಕ್ರಿಕೆಟ್‌ನ ದೈತ್ಯ ತಂಡವಾಗಿರುವ ಮುಂಬೈಯನ್ನು 10 ವಿಕೆಟ್‌ಗಳ ಅಂತರದಿಂದ ಸದೆ ಬಡಿದ ರೈಲ್ವೇಸ್ ತಂಡ ಮಹತ್ವದ ಸಾಧನೆ ಮಾಡಿತು.

ಶುಕ್ರವಾರ ನಡೆದ ಎಲೈಟ್ ಗ್ರೂಪ್ ‘ಬಿ’ಪಂದ್ಯದ ಮೂರನೇ ದಿನದಾಟದಲ್ಲಿ ರೈಲ್ವೇಸ್ ಈ ಸಾಧನೆ ಮಾಡಿತು. ಮೊದಲ ದಿನದಾಟದಲ್ಲಿ ಮುಂಬೈ ತಂಡವನ್ನು ಕೇವಲ 114 ರನ್‌ಗೆ ನಿಯಂತ್ರಿಸಿದ್ದ ರೈಲ್ವೇಸ್ ತಂಡ ನಾಯಕ ಕರಣ್ ಶರ್ಮಾ ಅವರ ಅಜೇಯ ಶತಕದ(112)ಸಹಾಯದಿಂದ ಮೊದಲ ಇನಿಂಗ್ಸ್‌ನಲ್ಲಿ 152 ರನ್ ಮುನ್ನಡೆ ಸಾಧಿಸಿತ್ತು.

ವಾಂಖೆಡೆ ಸ್ಟೇಡಿಯಂನಲ್ಲಿ ರೈಲ್ವೇಸ್‌ನ ವೇಗದ ಬೌಲರ್ ಹಿಮಾಂಶು ಸಾಂಗ್ವಾನ್(5-60)ದಾಳಿಗೆ ಹಳಿ ತಪ್ಪಿದ ಮುಂಬೈ ಎರಡನೇ ಇನಿಂಗ್ಸ್‌ನಲ್ಲೂ 198 ರನ್ ಗಳಿಸಿ ಆಲೌಟಾಯಿತು. ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯ ರಹಾನೆ 2ನೇ ಇನಿಂಗ್ಸ್‌ನಲ್ಲೂ ವಿಫಲರಾದರು. 41 ಬಾರಿ ರಣಜಿ ಚಾಂಪಿಯನ್ ಆಗಿರುವ ಮುಂಬೈ 3 ವಿಕೆಟ್ ನಷ್ಟಕ್ಕೆ 64 ರನ್‌ನಿಂದ ಮೂರನೇ ದಿನದಾಟವನ್ನು ಆರಂಭಿಸಿತು. ಔಟಾಗದೆ 3 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ರಹಾನೆ ಕೇವಲ 5 ರನ್ ಸೇರಿಸಿ 8 ರನ್‌ಗೆ ವಿಕೆಟ್ ಒಪ್ಪಿಸಿದರು. 63 ಟೆಸ್ಟ್ ಪಂದ್ಯವನ್ನಾಡಿರುವ ರಹಾನೆ ವಿಕೆಟ್‌ಕೀಪರ್ ನಿತಿನ್ ಭಿಲ್ಲೆಗೆ ಕ್ಯಾಚ್ ನೀಡಿದಾಗ ಮುಂಬೈ ಸ್ಕೋರ್ 69ಕ್ಕೆ4.

 ನಾಯಕ ಸೂರ್ಯಕುಮಾರ ಯಾದವ್(65,94 ಎಸೆತ)ಹಾಗೂ ಹಿರಿಯ ಆಟಗಾರ ಆದಿತ್ಯ ತಾರೆ(14,47 ಎಸೆತ)64 ರನ್ ಜೊತೆಯಾಟ ನಡೆಸಿ ಮುಂಬೈ ಇನಿಂಗ್ಸ್‌ಗೆ ಆಧಾರವಾದರು. ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಗೊಂಚಲು ಪಡೆದಿದ್ದ ಟಿ.ಪ್ರದೀಪ್ ಅವರು ಯಾದವ್-ತಾರೆ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಶಾರ್ದೂಲ್ ಠಾಕೂರ್(21) ಹಾಗೂ ಆಕಾಶ್ ಪಾರ್ಕರ್(ಔಟಾಗದೆ 35)ಮುಂಬೈಯನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡಿದರು.

ಗೆಲ್ಲಲು 47 ರನ್ ಸುಲಭ ಸವಾಲು ಪಡೆದ ರೈಲ್ವೇಸ್ ತಂಡ ಆರಂಭಿಕ ಆಟಗಾರರಾದ ಮ್ರುನಾಲ್ ದೇವಧರ್(27)ಹಾಗೂ ಪ್ರಥಮ್ ಸಿಂಗ್(19)ನೆರವಿನಿಂದ 12ನೇ ಓವರ್‌ನಲ್ಲಿ 10 ವಿಕೆಟ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಸಂಕ್ಷಿಪ್ತ ಸ್ಕೋರ್

► ಮುಂಬೈ 114 ಹಾಗೂ 198 (ಸೂರ್ಯಕುಮಾರ್ 65, ಆಕಾಶ್ ಪಾರ್ಕರ್ ಔಟಾಗದೆ 35, ಹಿಮಾಂಶು ಸಾಂಗ್ವಾನ್ 5-60)

 ► ರೈಲ್ವೇಸ್ 266 ಹಾಗೂ 47/1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News