ದಕ್ಷಿಣ ಆಫ್ರಿಕಾ ವಿರುದ್ಧ ಯೂತ್ ಏಕದಿನ ಸರಣಿ ಗೆದ್ದ ಭಾರತದ ಅಂಡರ್-19 ತಂಡ
ಈಸ್ಟ್‌ಲಂಡನ್, ಡಿ.28: ಯಶಸ್ವಿ ಜೈಸ್ವಾಲ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಭಾರತದ ಅಂಡರ್-19 ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾವನ್ನು ಇಲ್ಲಿ ಶನಿವಾರ ನಡೆದ ದ್ವಿತೀಯ ಯೂತ್ ಏಕದಿನ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.
ಶನಿವಾರ 18ನೇ ವಯಸ್ಸಿಗೆ ಕಾಲಿಟ್ಟ ಜೈಸ್ವಾಲ್ ತನ್ನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು. ಬ್ಯಾಟಿಂಗ್‌ನಲ್ಲಿ ಔಟಾಗದೆ 89 ರನ್ ಗಳಿಸಿದ್ದ ಜೈಸ್ವಾಲ್ ಬೌಲಿಂಗ್‌ನಲ್ಲಿ 4 ವಿಕೆಟ್ ಗೊಂಚಲು ಕಬಳಿಸಿದರು.
ಭಾರತದ ಅಂಡರ್-19 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಜೈಸ್ವಾಲ್ ಸ್ಪಿನ್ ಬೌಲಿಂಗ್ ದಾಳಿಯ ಮುಖಾಂತರ ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ದ.ಆಫ್ರಿಕಾ ತಂಡವನ್ನು 29.5 ಓವರ್‌ಗಳಲ್ಲಿ ಕೇವಲ 119 ರನ್‌ಗೆ ನಿಯಂತ್ರಿಸಲು ನೆರವಾದರು. ಆಕಾಶ್ ಸಿಂಗ್(2-37), ಅಥರ್ವ ಅಂಕೋಲೇಕರ್(2-16) ಹಾಗೂ ರವಿ ಬಿಶ್ನೋಯ್ (2-20)ತಲಾ 2 ವಿಕೆಟ್‌ಗಳನ್ನು ಪಡೆದರು.
ಬ್ಯಾಟಿಂಗ್ ವೈಫಲ್ಯ ಕಂಡ ದ.ಆಫ್ರಿಕಾದ ಪರ ವನ್‌ಡೌನ್ ಬ್ಯಾಟ್ಸ್‌ಮನ್ ಜೋನಾಥನ್ ಬರ್ಡ್ ಅಗ್ರ ಸ್ಕೋರರ್(25ರನ್)ಎನಿಸಿಕೊಂಡರು. ಆರಂಭಿಕ ಆಟಗಾರ ಆ್ಯಂಡ್ರೂ ಲೌಮೇಡ್(24)ಎರಡಂಕೆಯ ಸ್ಕೋರ್ ಗಳಿಸಿದರು. ಆರು ಬ್ಯಾಟ್ಸ್‌ಮನ್‌ಗಳು ಒಂದಂಕಿ ಗಳಿಸಿ ಔಟಾದರು.
ಗೆಲ್ಲಲು 120 ರನ್ ಬೆನ್ನಟ್ಟಿದ ಭಾರತ 16.2 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ನಾಯಕ ಪ್ರಿಯಂ ಗರ್ಗ್ ಶೂನ್ಯಕ್ಕೆ ಔಟಾದರು. ರಾವತ್ 2 ರನ್ ಗಳಿಸಿದರು.
ಇತ್ತೀಚೆಗೆ ಐಪಿಎಲ್ ಆಟಗಾರರ ಹರಾಜಿನಲ್ಲಿ 2.4 ಕೋ.ರೂ.ಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ಜೈಸ್ವಾಲ್ ತನ್ನ 56 ಎಸೆತಗಳ ಇನಿಂಗ್ ್ಸನಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ ಔಟಾಗದೆ 89 ರನ್ ಗಳಿಸಿ ಗಮನ ಸೆಳೆದರು. ಧುೃವ್ ಶೋರೆ ಔಟಾಗದೆ 26 ರನ್ ಗಳಿಸಿದರು.
ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದ ಜೈಸ್ವಾಲ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಭಾರತದ ಅಂಡರ್-19 ತಂಡ ಶುಕ್ರವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ದ.ಆಫ್ರಿಕಾವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿತ್ತು.