ಯಹೂದಿಯರ ಮೇಲೆ ಆಕ್ರಮಣಗೈದ ಆರೋಪಿಯ ಬಂಧನ
Update: 2019-12-30 23:47 IST
ಮಾನ್ಸಿ (ಅಮೆರಿಕ), ಡಿ. 30: ಅಮೆರಿಕದ ರಾಕ್‌ಲ್ಯಾಂಡ್ ಕೌಂಟಿಯಲ್ಲಿ ಶನಿವಾರ ಸಂಜೆ ನಡೆದ ಯಹೂದಿಯರ ಹನುಕ್ಕಾ ಹಬ್ಬದ ವೇಳೆ ಐವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 37 ವರ್ಷದ ಗ್ರಾಫ್ಟನ್ ಥಾಮಸ್ ಎಂದು ಗುರುತಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅಮೆರಿಕದ ಹಲವಾರು ನಾಯಕರು ಈ ದಾಳಿಯನ್ನು ಖಂಡಿಸಿದ್ದಾರೆ.
ಆರೋಪಿಯನ್ನು ದಾಳಿ ನಡೆದ ಎರಡು ಗಂಟೆಗಳ ಬಳಿಕ ಸುಮಾರು 50 ಕಿಲೋಮೀಟರ್ ದೂರದಲ್ಲಿ ಬಂಧಿಸಲಾಗಿದೆ.
ಮಾನ್ಸಿ ಪಟ್ಟಣದಲ್ಲಿರುವ ಯಹೂದಿ ಪ್ರಾರ್ಥನಾ ಮಂದಿರವೊಂದರ ಸಮೀಪದಲ್ಲಿರುವ ಯಹೂದಿ ಧರ್ಮಗುರು ರಬ್ಬಿ ನಿವಾಸದಲ್ಲಿ ನಡೆದ ಸಂಭ್ರಮಾಚರಣೆ ವೇಳೆ ದಾಳಿ ನಡೆದಿದೆ. ಐವರನ್ನು ಇರಿದ ಬಳಿಕ, ಆರೋಪಿಯು ವಾಹನವೊಂದರಲ್ಲಿ ಪರಾರಿಯಾಗಿದ್ದನು.