×
Ad

'ನೀವೊಬ್ಬ ಮೂರ್ಖ' ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು: ಆಸ್ಟ್ರೇಲಿಯಾ ಪ್ರಧಾನಿ ಮಾಡಿದ್ದೇನು ಗೊತ್ತಾ?

Update: 2020-01-03 17:19 IST

ಮೆಲ್ಬರ್ನ್, ಜ. 3: ಕಾಡ್ಗಿಚ್ಚಿನಿಂದ ಸುಟ್ಟು ಹೋದ ಪಟ್ಟಣವೊಂದಕ್ಕೆ ಗುರುವಾರ ಭೇಟಿ ನೀಡಿದ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಜನರ ಆಕ್ರೋಶವನ್ನು ಎದುರಿಸಬೇಕಾಯಿತು.

ಕೆಲವು ತಿಂಗಳಿಂದ ಆಸ್ಟ್ರೇಲಿಯದಾದ್ಯಂತ ದಾಂಧಲೆಗೈಯುತ್ತಿರುವ ಕಾಡ್ಗಿಚ್ಚಿಗೆ ಈಗಾಗಲೇ ಕನಿಷ್ಠ 18 ಮಂದಿ ಬಲಿಯಾಗಿದ್ದಾರೆ.

ನ್ಯೂಸೌತ್‌ವೇಲ್ಸ್ ರಾಜ್ಯದಲ್ಲಿರುವ ಕೊಬಾರ್ಗೊ ಪಟ್ಟಣಕ್ಕೆ ಪ್ರಧಾನಿ ಭೇಟಿ ನೀಡಿದಾಗ ಅವರ ಕೈಕುಲುಕಲು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ನಿರಾಕರಿಸಿದ ಪ್ರಸಂಗವೂ ನಡೆಯಿತು. ಅಗ್ನಿಶಾಮಕನ ಕೈಕುಲುಕಲು ಮೊರಿಸನ್ ಯತ್ನಿಸಿದಾಗ ಆ ವ್ಯಕ್ತಿಯು ಎದ್ದು ದೂರ ನಡೆದುದನ್ನು ವೀಡಿಯೊ ತುಣುಕೊಂದು ತೋರಿಸಿದೆ. ಇದಕ್ಕಾಗಿ ಪ್ರಧಾನಿ ಕ್ಷಮೆಯನ್ನೂ ಕೋರಿದರು.

ಆ ಅಗ್ನಿಶಾಮಕನು ಇತರರ ಮನೆಗಳನ್ನು ರಕ್ಷಿಸುತ್ತಿದ್ದಾಗ ಆತನ ಮನೆಯು ಕಾಡ್ಗಿಚ್ಚಿನಲ್ಲಿ ಸುಟ್ಟು ಹೋಗಿತ್ತು ಎಂದು ಸ್ಥಳೀಯ ಅಗ್ನಿಶಾಮಕ ಅಧಿಕಾರಿಯೊಬ್ಬರು ಬಳಿಕ ವಿವರಿಸಿದ್ದಾರೆ.

ಅದೇ ವೇಳೆ, ಹೊಸ ವರ್ಷದ ಮುನ್ನಾ ದಿನದಂದು ಕಾಡ್ಗಿಚ್ಚು ದಾಂಧಲೆಗೈಯುತ್ತಾ ಹೊಸ ಹೊಸ ಸ್ಥಳಗಳನ್ನು ಆಪೋಷಣ ತೆಗೆದುಕೊಳ್ಳುತ್ತಿದ್ದ ವೇಳೆ, ತನ್ನ ಅಧಿಕೃತ ನಿವಾಸ ಕಿರಿಬಿಲ್ಲಿ ಹೌಸ್‌ನಿಂದ ಸಿಡ್ನಿ ಹಾರ್ಬರ್‌ನ ಆಕಾಶದಲ್ಲಿ ಸುಡುಮದ್ದು ಪ್ರದರ್ಶನವನ್ನು ವೀಕ್ಷಿಸಿರುವುದಕ್ಕಾಗಿ ಇನ್ನೋರ್ವ ವ್ಯಕ್ತಿಯು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡರು.

 ‘‘ಇಲ್ಲಿ ನಿಮಗೆ ಯಾರ ಮತವೂ ಬೀಳುವುದಿಲ್ಲ. ನೀವೊಬ್ಬ ಮೂರ್ಖ’’ ಎಂದು ಆ ವ್ಯಕ್ತಿ ಹೇಳಿದರು.

ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ; ಅದು ಜನರ ಹತಾಶೆಯಷ್ಟೆ: ಮೊರಿಸನ್

ನನ್ನ ವಿರುದ್ಧದ ವರ್ತನೆ ಮತ್ತು ವಾಗ್ದಾಳಿಗಳನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ ಎಂದು ಮೊರಿಸನ್ ಶುಕ್ರವಾರ ಹೇಳಿದ್ದಾರೆ.

‘‘ಅವುಗಳು ಈ ನೈಸರ್ಗಿಕ ದುರಂತಗಳ ಭೀಕರತೆಯ ಬಗ್ಗೆ ಜನರಲ್ಲಿ ತುಂಬಿರುವ ಹತಾಶೆ, ನೋವು, ನಷ್ಟ ಮತ್ತು ಕೋಪಗಳ ಪ್ರತಿಫಲನ ಎಂಬುದಾಗಿ ನಾನು ಭಾವಿಸಿದ್ದೇನೆ’’ ಎಂದು ಪೂರ್ವ ವಿಕ್ಟೋರಿಯ ರಾಜ್ಯದ ಬೇರ್ನ್ಸ್‌ಡೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಟ್ರೇಲಿಯ ಪ್ರಧಾನಿ ಹೇಳಿದರು.

‘‘ನಾನು ಅದನ್ನು ಅರ್ಥ ಮಾಡಿಕೊಂಡಿದ್ದೇನೆ. ಜನರಿಗೆ ಅಗತ್ಯವಾಗಿರುವ ಸಮಾಧಾನ ಮತ್ತು ಬೆಂಬಲವನ್ನು ಯಾವುದೆಲ್ಲ ರೀತಿಯಲ್ಲಿ ಕೊಡಲು ಸಾಧ್ಯವೋ ಹಾಗೆ ಕೊಡುತ್ತೇವೆ’’ ಎಂದರು.

ಭಾರತ ಪ್ರವಾಸ ರದ್ದುಪಡಿಸುವ ಬಗ್ಗೆ ಚಿಂತನೆ: ಸ್ಕಾಟ್ ಮೊರಿಸನ್

ಆಸ್ಟ್ರೇಲಿಯದಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚು ನಿಯಂತ್ರಣದ ಉಸ್ತುವಾರಿ ನೋಡಿಕೊಳ್ಳುವುದಕ್ಕಾಗಿ ಈ ತಿಂಗಳಿಗೆ ನಿಗದಿಯಾಗಿರುವ ಭಾರತ ಪ್ರವಾಸವನ್ನು ರದ್ದುಪಡಿಸುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಆ ದೇಶದ ಪ್ರಧಾನಿ ಸ್ಕಾಟ್ ಮೊರಿಸನ್ ಶುಕ್ರವಾರ ಹೇಳಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ದೇಶವನ್ನು ಬಿಟ್ಟು ಹೋಗುವುದು ಸರಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸ್ಕಾಟ್ ಮೊರಿಸನ್, ‘‘ಈ ಪ್ರವಾಸಕ್ಕೆ ಹೋಗದಿರುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ’’ ಎಂದರು.

ಜನವರಿ 13ರಿಂದ 16ರವರೆಗೆ ಸ್ಕಾಟ್ ಮೊರಿಸನ್‌ರ ಭಾರತ ಭೇಟಿ ನಿಗದಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News