ಬೆಂಗಳೂರಿನತ್ತ ಧಾವಿಸಿದ ಪೃಥ್ವಿ ಶಾ

Update: 2020-01-05 04:38 GMT

ಮುಂಬೈ, ಜ.4: ಭುಜನೋವಿನಿಂದ ಬಳಲುತ್ತಿರುವ ಮುಂಬೈನ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯತ್ತ ಧಾವಿಸಿದ್ದು, ಶಾ ಭಾರತ ‘ಎ’ ತಂಡದೊಂದಿಗೆ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳುವ ವಿಚಾರ ತೂಗುಯ್ಯಾಲೆಯಲ್ಲಿದೆ.

 ಕರ್ನಾಟಕ ವಿರುದ್ಧ ಶುಕ್ರವಾರ ರಣಜಿ ಟ್ರೋಫಿಯ ಮೊದಲ ದಿನ ಫೀಲ್ಡಿಂಗ್ ಮಾಡುವಾಗ ಶಾ ಎಡ ಭುಜನೋವಿಗೆ ಒಳಗಾಗಿದ್ದು ಶನಿವಾರ ಫೀಲ್ಡಿಂಗ್ ಮಾಡಲಿಲ್ಲ ಹಾಗೂ ಮುಂಬೈನ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಶಾ ಮುಂಬರುವ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದು, ಭಾರತ ‘ಎ’ ತಂಡ ಜ.10ರಂದು ನ್ಯೂಝಿಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲಿದೆ.

   ‘‘ಪೃಥ್ವಿ ಶಾ ಅವರನ್ನು ಎನ್‌ಸಿಎಗೆ ಕಳುಹಿಸಿಕೊಡಲಾಗಿದೆ. ಮುಂಬೈ ಕ್ರಿಕೆಟ್ ಸಂಸ್ಥೆಯು ಬಿಸಿಸಿಐಯಿಂದ ಇ-ಮೇಲ್ ಸ್ವೀಕರಿಸಿದೆ. ಶಾ ಇದೀಗ ಬೆಂಗಳೂರಿಗೆ ನಿರ್ಗಮಿಸಿದ್ದಾರೆ. ಅವರಿಗೆ ಕೈ ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಅವರ ಭುಜದಲ್ಲಿ ಬಿರುಕು ಬಿಟ್ಟಿದೆ. ಅವರು 2ನೇ ಇನಿಂಗ್ ್ಸನಲ್ಲಿ ಬ್ಯಾಟಿಂಗ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ಎನ್‌ಸಿಎಯಲ್ಲಿ ಅವರ ಗಾಯ ಎಷ್ಟೊಂದು ಗಂಭೀರವಾಗಿದೆ ಎಂದು ಗೊತ್ತಾಗಲಿದೆ’’ ಎಂದು ಮುಂಬೈ ತಂಡದ ಮೀಡಿಯಾ ಮ್ಯಾನೇಜರ್ ಅಜಿಂಕ್ಯ ನಾಯಕ್ ತಿಳಿಸಿದ್ದಾರೆ. ಮೊದಲ ದಿನದಾಟವಾದ ಶುಕ್ರವಾರ ಓವರ್‌ಥ್ರೋವನ್ನು ತಡೆಯುವ ಯತ್ನದಲ್ಲಿದ್ದಾಗ ಶಾ ಅವರ ಬಲಭುಜಕ್ಕೆ ಗಾಯವಾಗಿತ್ತು. ಮುಂಬೈ ಫಿಸಿಯೋ ಅವರ ಸಮ್ಮುಖದಲ್ಲಿ ಎಂಆರ್‌ಐ ಸ್ಕಾನಿಂಗ್‌ಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News