2ನೇ ಟೆಸ್ಟ್ : ದ. ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ ಗೆ ರೋಚಕ ಜಯ

Update: 2020-01-08 17:48 GMT

ಕೇಪ್‌ಟೌನ್, ಜ.8: ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಮೋಘ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ನಾಟಕೀಯ ತಿರುವಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡು 4 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ಗೆಲ್ಲಲು 438 ರನ್ ಕಠಿಣ ಗುರಿ ಪಡೆದಿದ್ದ ಆತಿಥೇಯ ದಕ್ಷಿಣ ಆಫ್ರಿಕಾ ಬೆನ್‌ಸ್ಟೋಕ್ಸ್(3-35) , ಜೇಮ್ಸ್ ಆ್ಯಂಡರ್ಸನ್(2-23) ಹಾಗೂ ಡೆನ್ಲಿ(2-42)ಬೌಲಿಂಗ್ ದಾಳಿಗೆ ತತ್ತರಿಸಿ 137.4 ಓವರ್‌ಗಳಲ್ಲಿ 248 ರನ್‌ಗೆ ಆಲೌಟಾಯಿತು. ಸ್ಟೋಕ್ಸ್ ದಕ್ಷಿಣ ಆಫ್ರಿಕಾದ ಕೊನೆಯ ಮೂರು ವಿಕೆಟ್‌ಗಳನ್ನು ಬೇಗನೆ ಉರುಳಿಸಿ ಇಂಗ್ಲೆಂಡ್‌ಗೆ 189 ರನ್ ಗೆಲುವು ತಂದುಕೊಟ್ಟರು. 134ನೇ ಓವರ್‌ನ ಸತತ ಎರಡು ಎಸೆತಗಳಲ್ಲಿ ಬಾಲಂಗೋಚಿಗಳಾದ ಡ್ವೇಯ್ನೆ ಪ್ರಿಟೋರಿಯಸ್ ಹಾಗೂ ಅನ್ರಿಚ್ ನೊರ್ಟ್ಜೆ ವಿಕೆಟ್ ಪಡೆದ ಸ್ಟೋಕ್ಸ್ 138ನೇ ಓವರ್‌ನ 4ನೇ ಎಸೆತದಲ್ಲಿ ಫಿಲ್ಯಾಂಡರ್(8)ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಎರಡನೇ ಇನಿಂಗ್ಸ್ ಗೆ ತೆರೆ ಎಳೆದರು.

ದಕ್ಷಿಣ ಆಫ್ರಿಕಾ ಐದನೇ ಹಾಗೂ ಅಂತಿಮ ದಿನವಾದ ಮಂಗಳವಾರ 2 ವಿಕೆಟ್‌ಗಳ ನಷ್ಟ್ಟಕ್ಕೆ 126 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು.

 63 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಆಟಗಾರ ಪೀಟರ್ ಮಲಾನ್(84, 288 ಎಸೆತ, 3 ಬೌಂಡರಿ)ಹಾಗೂ ವಿಕೆಟ್‌ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್(50, 107 ಎಸೆತ, 7 ಬೌಂಡರಿ)ತಾಳ್ಮೆಯ ಅರ್ಧಶತಕದ ನೆರವಿನಿಂದ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಪಂದ್ಯವನ್ನು ಡ್ರಾಗೊಳಿಸುವ ಹಾದಿಯಲ್ಲಿತ್ತು. ಟೀ ವಿರಾಮದ ವೇಳೆಗೆ ಹರಿಣ ಪಡೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ತನ್ನ ಹೋರಾಟ ಜಾರಿಯಲ್ಲಿರಿಸಿತ್ತು. ಇಂಗ್ಲೆಂಡ್ ಬೌಲರ್‌ಗಳಿಗೆ ಪಿಚ್ ಹೆಚ್ಚು ನೆರವಾಗುತ್ತಿರಲಿಲ್ಲ. ಹೀಗಾಗಿ ಪಂದ್ಯ ಡ್ರಾ ಆಗುವತ್ತ ಮುಖ ಮಾಡಿತ್ತು. ಡಿಕಾಕ್ ಹಾಗೂ ರಾಸ್ಸಿ ವಾನ್‌ಡರ್ ಡುಸಾನ್(17)5ನೇ ವಿಕೆಟ್ ಜೊತೆಯಾಟದಲ್ಲಿ 203 ಎಸೆತಗಳಲ್ಲಿ 66 ರನ್ ಸೇರಿಸಿ ತಂಡವನ್ನು ಆಧರಿಸಿದರು.

 ಎಡಗೈ ಬ್ಯಾಟ್ಸ್‌ಮನ್ ಡಿಕಾಕ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ ಪಾರ್ಟ್ ಟೈಂ ಲೆಗ್ ಸ್ಪಿನ್ನರ್ ಜೋ ಡೆನ್ಲಿ ಇಂಗ್ಲೆಂಡ್‌ಗೆ ಗೆಲುವಿನ ವಿಶ್ವಾಸ ಮೂಡಿಸಿದರು. ಡುಸಾನ್(17)ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು. ಆಫ್ರಿಕಾದ ಕೊನೆಯ 3 ವಿಕೆಟ್‌ಗಳನ್ನು ಕಬಳಿಸಿದ ಸ್ಟೋಕ್ಸ್ ಇಂಗ್ಲೆಂಡ್‌ಗೆ ಭರ್ಜರಿ ಗೆಲುವು ತಂದರು. ಎಲ್ಗರ್(34), ಎಫ್‌ಡು ಪ್ಲೆಸಿಸ್(19), ಹಂಝಾ(18) ಹಾಗೂ ಡುಸಾನ್(17)ಎರಡಂಕೆಯ ಸ್ಕೋರ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 47, 2ನೇ ಇನಿಂಗ್ಸ್‌ನಲ್ಲಿ 72 ರನ್ ಗಳಿಸಿ ಆಲ್‌ರೌಂಡ್ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News