ಭಾರತ ವಿರುದ್ಧ ಮೂರನೇ ಟ್ವೆಂಟಿ-20 ಪಂದ್ಯಕ್ಕೆ ಇಸುರು ಉದಾನ ಅಲಭ್ಯ
ಹೊಸದಿಲ್ಲಿ, ಜ.8: ಶ್ರೀಲಂಕಾದ ಆಲ್‌ರೌಂಡರ್ ಇಸುರು ಉದಾನ ಬೆನ್ನುನೋವಿನ ಕಾರಣದಿಂದ ಭಾರತ ವಿರುದ್ಧ ಪುಣೆಯಲ್ಲಿ ಲಂಕಾ ಆಡಲಿರುವ ನಿರ್ಣಾಯಕ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಿಂದ ಹೊರಗುಳಿದಿದ್ದಾರೆ. 31ರ ಹರೆಯದ ಉದಾನ ಮಂಗಳವಾರ ರಾತ್ರಿ ಇಂದೋರ್‌ನಲ್ಲಿ ನಡೆದಿದ್ದ 2ನೇ ಟ್ವೆಂಟಿ-20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಗಾಯಗೊಂಡಿದ್ದರು. ಚೆಂಡು ತಡೆಯುವ ಯತ್ನದಲ್ಲಿ ಬಿದ್ದು ಗಾಯಗೊಂಡ ಉದಾನ ತಕ್ಷಣವೇ ಮೈದಾನವನ್ನು ತೊರೆದಿದ್ದರು. ಮತ್ತೆ ಮೈದಾನಕ್ಕೆ ಇಳಿಯಲಿಲ್ಲ. ಉದಾನ ಗಾಯಗೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾದ ಬೌಲಿಂಗ್ ದಾಳಿ ದುರ್ಬಲವಾಯಿತು. ದಸುನ್ ಶನಕ ತನ್ನ 4 ಓವರ್‌ಗಳಲ್ಲಿ 26 ರನ್ ನೀಡಿ ಬಿಗಿ ಬೌಲಿಂಗ್ ಮಾಡಿದ್ದರೂ ಭಾರತ 15 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಲಂಕಾ ಟ್ವೆಂಟಿ-20ಯಲ್ಲಿ ಸತತ ನಾಲ್ಕನೇ ಸೋಲು ಕಂಡಿತು. ಉದಾನಗೆ ಬೆನ್ನುನೋವು ಕಾಣಿಸಿಕೊಂಡಿದ್ದರೂ ತಂಡದೊಂದಿಗೆ ಪುಣೆಯಲ್ಲೇ ಉಳಿದುಕೊಂಡು ಫಿಜಿಯೋರಿಂದ ಚಿಕಿತ್ಸೆ ಪಪಡೆಯುತ್ತಿದ್ದಾರೆ.