ಸೈನಾ, ಸಿಂಧು ಕ್ವಾರ್ಟರ್ ಫೈನಲ್‌ಗೆ, ಸಮೀರ್ ಹೊರಕ್ಕೆ

Update: 2020-01-09 17:05 GMT

ಕೌಲಾಲಂಪುರ, ಜ.9: ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಸ್ಟಾರ್ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮಹಿಳೆಯರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಇಬ್ಬರು ಸುಲಭವಾಗಿ ಜಯ ದಾಖಲಿಸಿದ್ದಾರೆ.

ಕೇವಲ 34 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆ ಯರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಸಿಂಧು ವಿಶ್ವದ ನಂ.19ನೇ ಆಟಗಾರ್ತಿ ಅಯಾ ಒಹೊರಿ ಅವರನ್ನು 21-19, 21-15 ಗೇಮ್‌ಗಳ ಅಂತರದಿಂದ ಮಣಿಸಿದರು. ಸಿಂಧು ಸತತ 9ನೇ ಬಾರಿ ಒಹೊರಿ ಅವರನ್ನು ಸೋಲಿಸಿದ್ದಾರೆ.

24ರ ಹರೆಯದ ಸಿಂಧು ಕಳೆದ ವರ್ಷ ಬಾಸೆಲ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ ಅಥವಾ ಏಳನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಸಂಗ್ ಜಿ ಹ್ಯೂಯೂನ್‌ರನ್ನು ಎದುರಿಸಲಿದ್ದಾರೆ.

► ಸೈನಾಗೆ ಮುನ್ನಡೆ

ಗುರುವಾರ ಇಲ್ಲಿ 39 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ದಕ್ಷಿಣ ಕೊರಿಯಾದ ಆ್ಯನ್ ಸಿ ಯಂಗ್‌ರನ್ನು 25-23, 21-12 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. 2012ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ಮೊದಲ ಗೇಮ್‌ನಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿದ್ದರೂ 25-23 ಅಂತರದಿಂದ ಜಯ ಸಾಧಿಸಿದರು. 29ರ ಹರೆಯದ ಸೈನಾ ಎರಡನೇ ಗೇಮ್‌ನಲ್ಲಿ ಕೊರಿಯಾ ಎದುರಾಳಿಯನ್ನು ಹಿಮ್ಮೆಟ್ಟಿಸಿ 21-15 ಅಂತರದಿಂದ ಜಯ ಸಾಧಿಸಿದರು.

ಸೈನಾ ದಕ್ಷಿಣ ಕೊರಿಯಾ ಆಟಗಾರ್ತಿಯ ವಿರುದ್ಧ ಮೊದಲ ಬಾರಿ ಜಯ ದಾಖಲಿಸಿದರು. ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಕೊರಿಯಾ ಆಟಗಾರ್ತಿ ವಿರುದ್ಧ ಸೋತಿದ್ದರು. ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ಕ್ವಾರ್ಟರ್ ಫೈನಲ್‌ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಕರೊಲಿನಾ ಮರಿನ್ ಸವಾಲು ಎದುರಿಸಲಿದ್ದಾರೆ. ಸೈನಾ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಲಿಯಾನ್ ಟಾನ್‌ರನ್ನು 21-15, 21-17 ಗೇಮ್‌ಗಳ ಅಂತರದಿಂದ ಮಣಿಸಿದ್ದರು.

► ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಅಂತ್ಯ

ಸಮೀರ್ ವರ್ಮಾ ಹಾಗೂ ಎಚ್.ಎಸ್. ಪ್ರಣಯ್ ಸೋಲುಣ್ಣುವ ಮೂಲಕ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಸಮೀರ್ ಎರಡನೇ ಸುತ್ತಿನ ಪಂದ್ಯದಲ್ಲಿ ಮಲೇಶ್ಯದ ಲೀ ಝಿ ವಿರುದ್ಧ 19-21, 20-22 ಗೇಮ್‌ಗಳ ಅಂತರದಿಂದ ಸೋಲನುಭವಿಸಿದರು.

 52 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಭಾರತದ ಆಟಗಾರ ಸಮೀರ್ ತೀವ್ರ ಪೈಪೋಟಿ ನೀಡಿದರೂ ಮಲೇಶ್ಯ ಆಟಗಾರನಿಗೆ ಶರಣಾದರು.

ಪ್ರಣಯ್‌ಗೆ ಜಪಾನ್‌ನ ಅಗ್ರ ಶ್ರೇಯಾಂಕದ ಕೆಂಟೊ ಮೊಮೊಟಾ ನಿರ್ಗಮನ ದಾರಿ ತೋರಿಸಿದರು. ಮೊಮೊಟಾ ವಿರುದ್ಧ ಪ್ರಣಯ್ 14-21, 16-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News