ಮುಗುರುಝ ಸೆಮಿ ಫೈನಲ್‌ಗೆ
ಬೀಜಿಂಗ್, ಜ.9: ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಗಾರ್ಬೈನ್ ಮುಗುರುಝ ಶೆಂಝೆನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಗುರುಝ ಕಝಖ್‌ಸ್ತಾನದ ಝರಿನಾ ಡಿಯಾಸ್‌ರನ್ನು 6-4, 2-6, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಕಳೆದ ವರ್ಷದ ಎಪ್ರಿಲ್‌ನಲ್ಲಿ ಮೊಂಟೆರ್ರಿ ಓಪನ್‌ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಬಳಿಕ ಸ್ಪೇನ್‌ನ ಮುಗುರುಝ ಮೊದಲ ಬಾರಿ ಸೆಮಿ ಫೈನಲ್ ತಲುಪಿದ್ದಾರೆ. ಆರನೇ ಶ್ರೇಯಾಂಕದ ಹಾಗೂ ವಿಶ್ವದ 35ನೇ ರ್ಯಾಂಕಿನ ಮುಗುರುಝ 2019ರ ಫ್ರೆಂಚ್ ಓಪನ್ ಬಳಿಕ ಮೊದಲ ಬಾರಿ ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 2017ರಲ್ಲಿ ವಿಶ್ವದ ನಂ.1 ಆಟಗಾರ್ತಿಯಾಗಿದ್ದ ಮುಗುರುಝ 3 ವರ್ಷದ ಹಿಂದಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಮುಗುರುಝ ಮುಂದಿನ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಎಕಟೆರಿನಾ ಅಲೆಕ್ಸಾಂಡ್ರೊವಾರನ್ನು ಎದುರಿಸಲಿದ್ದಾರೆ. ರಶ್ಯದ ಎಕಟೆರಿನಾ ಚೀನಾದ ವಾಂಗ್ ಕ್ಷಿಯಾಂಗ್‌ರನ್ನು 3-6, 6-4, 6-3 ಅಂತರದಿಂದ ಮಣಿಸಿದ್ದಾರೆ.