ಬ್ರಿಸ್ಪೇನ್ ಇಂಟರ್‌ನ್ಯಾಶನಲ್: ವಿಶ್ವದ ನಂ.1 ಆಟಗಾರ್ತಿ ಬಾರ್ಟಿಗೆ ಸೋಲು
ಬ್ರಿಸ್ಬೇನ್, ಜ.9: ವಿಶ್ವದ ನಂ.1 ಆಟಗಾರ್ತಿ ಅಶ್ಲೆ ಬಾರ್ಟಿ ಅಮೆರಿಕದ ಕ್ವಾಲಿಫೈಯರ್ ಜೆನ್ನಿಫರ್ ಬ್ರಾಡಿ ವಿರುದ್ಧ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ನೇರ ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು. ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ಈ ಸೋಲು ಬಾರ್ಟಿಗೆ ಹಿನ್ನಡೆ ಉಂಟು ಮಾಡಿದೆ.
ಇಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬ್ರಾಡಿ ಅವರು ಇದೇ ಮೊದಲ ಬಾರಿ ಅಗ್ರ-10ರೊಳಗಿನ ಆಟಗಾರ್ತಿಯ ವಿರುದ್ಧ 6-4, 7-6(4) ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಕಳೆದ ವರ್ಷ ನಡೆದ ಎರಡು ಪಂದ್ಯಗಳಲ್ಲಿ ಬಾರ್ಟಿ ಅವರು ಬ್ರಾಡಿ ವಿರುದ್ಧ ಸೆಟ್‌ನ್ನು ಕಳೆದುಕೊಂಡಿರಲಿಲ್ಲ. ಅಮೆರಿಕದ ಬ್ರಾಡಿ ಮೊದಲ ಸೆಟ್‌ನಲ್ಲಿ ಒಂದು ಬಾರಿ ಸರ್ವ್ ನ್ನು ಬ್ರೇಕ್ ಮಾಡಿದರೆ, ಎರಡನೇ ಸೆಟ್‌ನ್ನು ಟೈ-ಬ್ರೇಕರ್‌ನಲ್ಲಿ ಗೆದ್ದುಕೊಂಡರು.
‘‘ಈ ಗೆಲುವು ನನಗೆ ತುಂಬಾ ಖುಷಿ ತಂದಿದೆ. ಬಾರ್ಟಿ ಓರ್ವ ಶ್ರೇಷ್ಠ ಆಟಗಾರ್ತಿ ಹಾಗೂ ಉತ್ತಮ ವ್ಯಕ್ತಿ. ನನಗಿಂದು ಸ್ವಲ್ಪ ಭಯವಾಗಿತ್ತು. ಇವೆಲ್ಲದರ ನಡುವೆ ಉತ್ತಮವಾಗಿ ಆಡಿದ್ದೇನೆ’’ ಎಂದು ಪಂದ್ಯ ಬಳಿಕ ಬ್ರಾಡಿ ಹೇಳಿದ್ದಾರೆ.
ಮೂರು ಕ್ವಾಲಿಫೈಯರ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಬ್ರಾಡಿ ಟೂರ್ನಮೆಂಟ್‌ನ ಮೊದಲ ಸುತ್ತಿನಲ್ಲಿ ಮರಿಯಾ ಶರಪೋವಾರನ್ನು ಸೋಲಿಸಿದ್ದರು. ಮ್ಯಾಡಿಸನ್ ಕೀ, ಅಲಿಸನ್ ರಿಸ್ಕೆ ಹಾಗೂ ಡೇನಿಯಲ್ ಕಾಲಿನ್ಸ್ ಬಳಿಕ ಕ್ವಾರ್ಟರ್ ಫೈನಲ್ ತಲುಪಿದ ಅಮೆರಿಕದ ನಾಲ್ಕನೇ ಆಟಗಾರ್ತಿಯಾಗಿದ್ದಾರೆ.