ಮುಶರ್ರಫ್ ಮರಣದಂಡನೆ ರದ್ದುಪಡಿಸಿದ ಲಾಹೋರ್ ಹೈಕೋರ್ಟ್

Update: 2020-01-13 16:35 GMT

ಲಾಹೋರ್ (ಪಾಕಿಸ್ತಾನ), ಜ. 13: ದೇಶದ್ರೋಹ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಸೇನಾಡಳಿತಗಾರ ಪರ್ವೇಝ್ ಮುಶರ್ರಫ್‌ಗೆ ವಿಶೇಷ ನ್ಯಾಯಾಲಯವೊಂದು ನೀಡಿರುವ ಮರಣದಂಡನೆಯನ್ನು ಲಾಹೋರ್ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ. ಮರಣ ದಂಡನೆ ನೀಡಿರುವ ವಿಶೇಷ ನ್ಯಾಯಾಲಯವೇ ಸಂವಿಧಾನಬಾಹಿರ ಎಂದು ನ್ಯಾಯಾಲಯ ಸಾರಿದೆ ಎಂದು ಸರಕಾರಿ ಪ್ರಾಸಿಕ್ಯೂಟರ್ ಎಎಫ್‌ಪಿ ಸುದ್ದಿಸಂಸ್ಥೆಗೆ ಹೇಳಿದರು.

ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಭಾರೀ ವಿವಾದವನ್ನು ಸೃಷ್ಟಿಸಿತ್ತು. ಆ ತೀರ್ಪು ‘ದ್ವೇಷ ಸಾಧನೆ’ ಎಂಬುದಾಗಿ ದುಬೈಯಲ್ಲಿ ನೆಲೆಸಿರುವ ಮುಶರ್ರಫ್ ಹೇಳಿದ್ದರು.

ಮರಣದಂಡನೆ ತೀರ್ಪು ಕಾನೂನುಬಾಹಿರ ಎಂಬುದಾಗಿ ಸೋಮವಾರ ಲಾಹೋರ್ ಹೈಕೋರ್ಟ್ ಹೇಳಿತು.

‘‘ದೂರು ದಾಖಲು, ನ್ಯಾಯಾಲಯದ ರಚನೆ, ಪ್ರಾಸಿಕ್ಯೂಶನ್ ತಂಡ ಆಯ್ಕೆ ಕಾನೂನುಬಾಹಿರವಾಗಿದೆ. ಹಾಗಾಗಿ ಅದನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಲಾಗಿದೆ. ಹಾಗೂ ವಿಶೇಷ ನ್ಯಾಯಾಲಯ ನೀಡಿರುವ ಸಂಪೂರ್ಣ ತೀರ್ಪನ್ನೇ ರದ್ದುಗೊಳಿಸಲಾಗಿದೆ’’ ಎಂದು ಸರಕಾರಿ ಪ್ರಾಸಿಕ್ಯೂಟರ್ ಇಶ್ತಿಯಾಖ್ ಎ. ಖಾನ್ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದರು.

‘‘ಮುಶರ್ರಫ್ ಈಗ ಮುಕ್ತ ವ್ಯಕ್ತಿ. ಅವರ ವಿರುದ್ಧ ಈಗ ಯಾವುದೇ ತೀರ್ಪು ಇಲ್ಲ’’ ಎಂದು ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News