ನ್ಯೂಝಿಲ್ಯಾಂಡ್ ಪ್ರವಾಸ: ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ

Update: 2020-01-14 16:47 GMT

ಹೊಸದಿಲ್ಲಿ, ಜ.14: ಆಕ್ಲೆಂಡ್‌ನಲ್ಲಿ ಜನವರಿ 25ರಿಂದ ಆರಂಭವಾಗಲಿರುವ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ 20 ಸದಸ್ಯೆಯರನ್ನು ಒಳಗೊಂಡ ಭಾರತೀಯ ಮಹಿಳಾ ಹಾಕಿ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಸ್ಟಾರ್ ಸ್ಟ್ರೈಕರ್ ರಾಣಿ ರಾಂಪಾಲ್ ನಾಯಕಿನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಹಾಕಿ ಇಂಡಿಯಾ ತಂಡವನ್ನು ಪ್ರಕಟಿಸಿದ್ದು, ಗೋಲ್‌ಕೀಪರ್ ಸವಿತಾ ಉಪ ನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ಜನವರಿ 25ರಂದು ನ್ಯೂಝಿಲ್ಯಾಂಡ್ ಡೆವಲಪ್‌ಮೆಂಟ್ ತಂಡವನ್ನು ಎದುರಿಸುವುದರೊಂದಿಗೆ ಕಿವೀಸ್ ಹಾಕಿ ಪ್ರವಾಸ ಆರಂಭಿಸಲಿದೆ. ಜ.27 ಹಾಗೂ 29ರಂದು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಫೆ.4ರಂದು ಗ್ರೇಟ್ ಬ್ರಿಟನ್ ತಂಡವನ್ನು ಮುಖಾಮುಖಿಯಾಗಲಿದೆ. ಫೆ.5ರಂದು ಮತ್ತೊಮ್ಮೆ ನ್ಯೂಝಿಲ್ಯಾಂಡ್ ಮಹಿಳಾ ತಂಡವನ್ನು ಎದುರಿಸುವುದರೊಂದಿಗೆ ತನ್ನ ಹಾಕಿ ಪ್ರವಾಸವನ್ನು ಮುಕ್ತಾಯಗೊಳಿಸಲಿದೆ.

 ‘‘ನಮ್ಮ ತಂಡದೊಳಗೆ ಹೆಚ್ಚು ಸ್ಪರ್ಧೆಯನ್ನು ಸೃಷ್ಟಿಸಲು ಕಿವೀಸ್ ಪ್ರವಾಸವನ್ನು ಬಳಸಿಕೊಳ್ಳಲು ಇಷ್ಟಪಡುವೆ. ನಾವು 20 ಸದಸ್ಯೆಯರ ತಂಡವನ್ನು ಆಯ್ಕೆ ಮಾಡಿದ್ದರೂ, 16 ಆಟಗಾರ್ತಿಯರನ್ನು ನಾವು ಬಳಸುತ್ತೇವೆ. ಒಲಿಂಪಿಕ್ಸ್‌ನಲ್ಲಿ 16 ಹಾಗೂ ಇತರ ಪಂದ್ಯಗಳಲ್ಲಿ 18 ಸದಸ್ಯೆಯರು ಆಡುತ್ತಾರೆ. ವಿಶ್ವದ ನಂ.5ನೇ ತಂಡ ಬ್ರಿಟನ್ ಹಾಗೂ ಆರನೇ ತಂಡ ನ್ಯೂಝಿಲ್ಯಾಂಡ್ ವಿರುದ್ಧ ನಿರ್ಭೀತಿಯಿಂದ ಆಡುವ ಅಪೂರ್ವ ಅವಕಾಶವೂ ನಮ್ಮ ತಂಡಕ್ಕೆ ಒದಗಿಬಂದಿದೆ’’ ಎಂದು ಮುಖ್ಯ ಕೋಚ್ ಜೊಯೆರ್ಡ್ ಮರ್ಜಿನ್ ಹೇಳಿದ್ದಾರೆ.

<ಭಾರತ ಹಾಕಿ ತಂಡ: ರಾಣಿ ರಾಂಪಾಲ್ (ನಾಯಕಿ), ಸವಿತಾ(ಉಪ-ನಾಯಕಿ), ರಜನಿ ಎಟಿಮುರ್ಪು, ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ರೀನಾ ಖೋಖರ್, ಸಲೀಮಾ ಟೇಟ್, ಸುಶೀಲಾ ಚಾನು, ನಿಶಾ, ನಮಿತಾ ಟೊಪ್ಪೊ, ಉದಿತಾ, ಮೋನಿಕಾ, ಲಿಲಿಮಾ ಮಿಂಝ್, ನೇಹಾ, ಸೋನಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ಲಾಲ್‌ರೆಂಸಿಯಾಮಿ, ವಂದನಾ ಕಟಾರಿಯ ಹಾಗೂ ನವಜೋತ್ ಕೌರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News