ಎಂಎಸ್ ಧೋನಿ ವೃತ್ತಿಜೀವನ ಬಹುತೇಕ ಅಂತ್ಯ?

Update: 2020-01-16 11:57 GMT

 ಹೊಸದಿಲ್ಲಿ, ಜ.16: 2019ರ ಅಕ್ಟೋಬರ್‌ನಿಂದ 2020ರ ಸೆಪ್ಟಂಬರ್ ಅವಧಿಯ ವಾರ್ಷಿಕ ಕೇಂದ್ರೀಯ ಗುತ್ತಿಗೆಯಿಂದ ಭಾರತೀಯ ಕ್ರಿಕೆಟ್ ದಂತಕತೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಸಿಸಿಐ ಕೈಬಿಟ್ಟಿದೆ. ಈ ಮೂಲಕ ಧೋನಿ ವೃತ್ತಿಜೀವನ ಬಹುತೇಕ ಅಂತ್ಯವಾಗುವ ಲಕ್ಷಣ ಕಂಡುಬಂದಿದೆ.

 ಮಾಜಿ ನಾಯಕ ಧೋನಿ ಕಳೆದ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಸೋತ ಬಳಿಕ ಯಾವುದೇ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಧೋನಿ ಕಳೆದ ಬಾರಿಯ ಬಿಸಿಸಿಐನ ವಾರ್ಷಿಕ ಗುತ್ತಿಗೆಯಲ್ಲಿ ಎ ಶ್ರೇಣಿ(ರೂ.5 ಕೋ.ರೂ.)ಪಡೆದಿದ್ದರು. ಆಟಗಾರರ ಗುತ್ತಿಗೆಯಲ್ಲಿ ಒಟ್ಟು ನಾಲ್ಕು ಶ್ರೇಣಿಗಳಿವೆ(ಎ+, ಎ, ಬಿ ಹಾಗೂ ಸಿ). ಈ ಬಾರಿ ಧೋನಿ ಯಾವುದೇ ಶ್ರೇಣಿಯಲ್ಲಿ ಸ್ಥಾನ ಪಡೆದಿಲ್ಲ.

2019ರ ಜುಲೈ 9ರ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಲ್ಲಿ ಆಡದ ಧೋನಿಯ ಹೆಸರನ್ನು ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿರುವ ವಿಚಾರ ಹೆಚ್ಚು ಅಚ್ಚರಿ ವಿಷಯವಾಗಿ ಉಳಿದಿಲ್ಲ. ಇದೀಗ ವಿಶ್ರಾಂತಿಯಲ್ಲಿರುವ ಧೋನಿ ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸಲು ನಿರಾಕರಿಸುತ್ತಿದ್ದಾರೆ.

ಧೋನಿ ಶೀಘ್ರವೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂದು ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಇತ್ತೀಚೆಗೆ ಹೇಳಿದ್ದರು. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News