ಪಾಕಿಸ್ತಾನ ತಂಡಕ್ಕೆ ಶುಐಬ್ ಮಲಿಕ್, ಮುಹಮ್ಮದ್ ಹಫೀಝ್ ವಾಪಸ್

Update: 2020-01-16 17:53 GMT

ಕರಾಚಿ, ಜ.16: ಬಾಂಗ್ಲಾದೇಶದ ವಿರುದ್ಧ ಜನವರಿ 24ರಿಂದ ಲಾಹೋರ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ 15 ಸದಸ್ಯರುಗಳನ್ನು ಒಳಗೊಂಡ ಪಾಕಿಸ್ತಾನ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಮಾಜಿ ನಾಯಕ ಶುಐಬ್ ಮಲಿಕ್ ಹಾಗೂ ಅನುಭವಿ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ತಂಡಕ್ಕೆ ವಾಪಸಾಗಿದ್ದಾರೆ. ವೇಗದ ಬೌಲರ್ ಹಾರಿಸ್ ರವೂಫ್ ಹಾಗೂ ಬ್ಯಾಟ್ಸ್ ಮನ್ ಅಹ್ಸಾನ್ ಅಲಿ ಅವರನ್ನು ಆಯ್ಕೆಗಾರರು ಮೊದಲ ಬಾರಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರೂ ಆಗಿರುವ ಮಿಸ್ಬಾವುಲ್ ಹಕ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಬಾಂಗ್ಲಾದೇಶ ಸರಣಿಯಿಂದ ಹಿರಿಯ ವೇಗಿಗಳಾದ ವಹಾಬ್ ರಿಯಾಝ್ ಹಾಗೂ ಮುಹಮ್ಮದ್ ರಿಯಾಝ್‌ರನ್ನು ಕೈಬಿಟ್ಟಿದೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಟಿ-20 ಸರಣಿಯನ್ನು 0-2ರಿಂದ ಸೋತಿರುವ ತಂಡದಲ್ಲಿದ್ದ ಏಳು ಆಟಗಾರರನ್ನು ಆಯ್ಕೆ ಸಮಿತಿಯು ಕೈಬಿಟ್ಟಿದೆ. ಆಸಿಫ್ ಅಲಿ, ಫಕಾರ್ ಝಮಾನ್, ಹಾರಿಸ್ ಸೊಹೈಲ್, ಇಮಾಮ್‌ವುಲ್ ಹಕ್, ಮುಹಮ್ಮದ್ ಆಮಿರ್, ಮುಹಮ್ಮದ್ ಇರ್ಫಾನ್ ಹಾಗೂ ವಹಾಬ್ ರಿಯಾಝ್‌ರನ್ನು ತಂಡದಿಂದ ಕೈಬಿಡಲಾಗಿದೆ. ಮಲಿಕ್ ಹಾಗೂ ಹಫೀಝ್ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಪಾಕ್ ಪರ ಆಡಿದ್ದರು.

ಪಾಕಿಸ್ತಾನ ಟಿ-20 ತಂಡ: ಬಾಬರ್ ಆಝಂ(ನಾಯಕ), ಅಹ್ಸಾನ್ ಅಲಿ, ಅಮದ್ ಬಟ್, ಹಾರಿಸ್ ರವೂಫ್, ಇಫ್ತಿಕಾರ್ ಅಹ್ಮದ್, ಇಮಾದ್ ವಸೀಂ, ಖುಷ್‌ದಿಲ್ ಶಾ, ಮುಹಮ್ಮದ್ ಹಫೀಝ್, ಮುಹಮ್ಮದ್ ಹಸನೈನ್, ಮುಹಮ್ಮದ್ ರಿಝ್ವಿನ್(ವಿಕೆಟ್‌ಕೀಪರ್), ಮುಸಾ ಖಾನ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಶುಐಬ್ ಮಲಿಕ್, ಉಸ್ಮಾನ್ ಖಾದಿರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News