ರಣಜಿ ಟ್ರೋಪಿ: ಮನೋಜ್ ತಿವಾರಿ ಚೊಚ್ಚಲ ತ್ರಿಶತಕ

Update: 2020-01-20 17:26 GMT

ಕಲ್ಯಾಣಿ (ಪ.ಬಂ.), ಜ.20: ಹಿರಿಯ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ತಮ್ಮ ಚೊಚ್ಚಲ ಪ್ರಥಮ ದರ್ಜೆ ತ್ರಿಶತಕ ಬಾರಿಸಿ ಬಂಗಾಳ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮೇಲುಗೈ ಸಾಧಿಸುವಲ್ಲಿ ನೆರವಾಗಿದ್ದಾರೆ.

   12 ಏಕದಿನ ಮತ್ತು 3 ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 34 ವರ್ಷದ ತಿವಾರಿ 414 ಎಸೆತಗಳಲ್ಲಿ 30 ಬೌಂಡರಿ , ಐದು ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 303 ರನ್ ಗಳಿಸಿದರು. ಅವರ ಮ್ಯಾರಥಾನ್ ಬ್ಯಾಟಿಂಗ್ 10 ಗಂಟೆ ಮತ್ತು 30 ನಿಮಿಷಗಳ ಕಾಲ ನಡೆಯಿತು.

                 ಪಂದ್ಯದ ಎರಡನೇ ದಿನವಾಗಿರುವ ಸೋಮವಾರ ಅಂತಿಮ ಅವಧಿಯ ಆಟದ ನಾಲ್ಕನೇ ಎಸೆತದಲ್ಲಿ ತಿವಾರಿ ತ್ರಿಶತಕ ತಲುಪಿದರು. ಅಂತಿಮ 50 ರನ್ ಕೇವಲ 37 ಎಸೆತಗಳಲ್ಲಿ ಅವರು ಜಮೆ ಮಾಡಿದರು. ಅರೆಕಾಲಿಕ ಬೌಲರ್ ಬುದ್ಧಿ ರಾಹುಲ್ ಅವರ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ತ್ರಿಶತಕ ದಾಖಲಿಸಿದ ಮನೋಜ್ ತಿವಾರಿ ತನ್ನ ಸ್ಕೋರ್‌ನ್ನು 303ಕ್ಕೆ ಏರಿಸಿದರು. ಅವರು ತ್ರಿಶತಕ ದಾಖಲಿಸಿದ ಬೆನ್ನಲ್ಲೇ ಬಂಗಾಳ ತನ್ನ ಮೊದಲ ಇನ್ನಿಂಗ್ಸ್‌ನ್ನು 7 ವಿಕೆಟ್ ನಷ್ಟದಲ್ಲಿ 635ಕ್ಕೆ ಡಿಕ್ಲೇರ್ ಮಾಡಿಕೊಂಡಿತು. ತಿವಾರಿ ಭಾರತದ ಪರ ಕೊನೆಯ ಬಾರಿ 2015 ರಲ್ಲಿ ಆಡಿದ್ದರು. ಇದೀಗ ಅವರು ತ್ರಿಶತಕ ಬಾರಿಸಿದ ಬಂಗಾಳದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1998-99ರಲ್ಲಿ ಗುವಾಹಟಿಯಲ್ಲಿ ದೇವಾಂಗ್ ಗಾಂಧಿ ಅಸ್ಸಾಂ ವಿರುದ್ಧ 323 ರನ್ ಗಳಿಸಿದ್ದರು.

         ಈ ಹಿಂದೆ ತಿವಾರಿ 2011-12ರಲ್ಲಿ ಕೋಲ್ಕತಾದಲ್ಲಿ ಮಧ್ಯಪ್ರದೇಶದ ವಿರುದ್ಧ ಬಂಗಾಳ ತಂಡದ ನಾಯಕನಾಗಿ 267 ರನ್ ಗಳಿಸಿದ್ದರು. ಇದು ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಕಳೆದ ತಿಂಗಳು ನಡೆದ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ತಿವಾರಿ ರಣಜಿ ಪಂದ್ಯದಲ್ಲಿ ತನ್ನ ಸಾಮಥರ್ಯ್ವನ್ನು ಸಾಬೀತುಪಡಿಸಿದ್ದಾರೆ. ರಾಷ್ಟ್ರೀಯ ಆಯ್ಕೆ ಸಮಿತಿಯ ದೇವಾಂಗ್ ಗಾಂಧಿ ಅನಧಿಕೃತಗಾಗಿ ಬಂಗಾಳ ತಂಡದ ಡ್ರೆಸ್ಸಿಂಗ್ ಕೊಠಡಿಗೆ ಪ್ರವೇಶಿಸಿದಾಗ ಅವರನ್ನು ಹೊರಹೋಗುವಂತೆ ಹೇಳಿ ತಿವಾರಿ ವಿವಾದಕ್ಕೆ ಸಿಲುಕಿದ್ದರು. ಈ ವರ್ಷದ ಆರಂಭದಲ್ಲಿ ತಿವಾರಿ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು, ಆಯ್ಕೆ ಸಮಿತಿ 24 ವರ್ಷದ ಅಭಿಮನ್ಯು ಈಶ್ವರನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದೆ.

               ತಿವಾರಿ ಅವರ ಸಂವೇದನಾಶೀಲ ಬ್ಯಾಟಿಂಗ್‌ನ ಬಳಿಕ ಇನಿಂಗ್ಸ್ ಆರಂಭಿಸಿದ ಹೈದರಾಬಾದ್ ತಂಡವು ಬಂಗಾಳದ ವೇಗದ ಜೋಡಿ ಆಕಾಶ್ ದೀಪ್ (46ಕ್ಕೆ 3) ಮತ್ತು ಮುಖೇಶ್ ಕುಮಾರ್ (29ಕ್ಕೆ 2) ದಾಳಿಗೆ ಸಿಲುಕಿ 5 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿ ಒತ್ತಡಕ್ಕೆ ಸಿಲುಕಿದೆ. ತಿವಾರಿ ಅವರು ಬಂಗಾಳದ 9ನೇ ಬ್ಯಾಟ್ಸ್‌ಮನ್ ಅರ್ನಾಬ್ ನಂದಿ ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 159 ರನ್ ಸೇರಿಸಲು ನೆರವಾದರು. ನಂದಿ ಅಜೇಯ 63 ರನ್ ( 83 ಎ,8ಬೌ, 1ಸಿ) ಗಳಿಸಿದರು. ಶಹಬಾಝ್ ಅಹ್ಮದ್ 49 ರನ್(79 ಎ,5ಬೌ, 1ಸಿ) ಗಳಿಸಿದರು. ತಿವಾರಿ ಮತ್ತು ಅಹ್ಮದ್ 8ನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನೀಡಿದರು. ಆದರೆ ಅಹ್ಮದ್ ರನೌಟ್ ಆಗಿ 1 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ತಿವಾರಿ ಮೊದಲ ದಿನದಾಟದಂತ್ಯಕ್ಕೆ 156 ರನ್ ಗಳಿಸಿದ್ದರು. ಸೋಮವಾರ ಬ್ಯಾಟಿಂಗ್ ಮುಂದುವರಿಸಿ 166ಕ್ಕೆ ತಲುಪುವಾಗ ರವಿ ಕಿರಣ್ (74ಕ್ಕೆ 3) ಬೌಲಿಂಗ್‌ನಲ್ಲಿ ಔಟಾಗುವ ಅವಕಾಶದಿಂದ ಪಾರಾದರು. ಜೀವದಾನ ಪಡೆದ ತಿವಾರಿ ಬ್ಯಾಟಿಂಗ್ ಮುಂದುವರಿಸಿ ಆಫ್ ಸ್ಪಿನ್ನರ್ ಸಾಕೇತ್ ಸಾಯಿರಾಮ್ ಎಸೆತದಲ್ಲಿ ಬೌಂಡರಿ ಬಾರಿಸುವುದರೊಂದಿಗೆ ದ್ವಿಶತಕ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್

►  ಬಂಗಾಳ: 151.4 ಓವರ್‌ಗಳಲ್ಲಿ 635/7 (ಮನೋಜ್ ತಿವಾರಿ ಔಟಾಗದೆ 303, ಶ್ರೀವತ್ಸ ಗೋಸ್ವಾಮಿ 95, ಅರ್ನಾಬ್ ನಂದಿ ಔಟಾಗದೆ 65 , ಶಹಬಾಝ್ ಅಹ್ಮದ್ 49; ರವಿ ಕಿರಣ್ 74ಕ್ಕೆ 3)

►  ಹೈದರಾಬಾದ್: 20 ಓವರ್‌ಗಳಲ್ಲಿ 83/5 (ಆಕಾಶ್ ದೀಪ್ 46ಕ್ಕೆ 3 , ಮುಖೇಶ್ ಕುಮಾರ್ 29ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News