ಅಗ್ರಸ್ಥಾನಗಳನ್ನು ಉಳಿಸಿಕೊಂಡ ಕೊಹ್ಲಿ, ರೋಹಿತ್

Update: 2020-01-20 17:43 GMT


 

ದುಬೈ, ಜ.20:ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅಗ್ರಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಬೌಲರ್‌ಗಳ ರ‍್ಯಾಂಕಿಂಗ್ನಲ್ಲಿ ಬುಮ್ರಾ ನಂ.1

ಸೋಮವಾರ ಐಸಿಸಿ ಆಟಗಾರರ ರ್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದ್ದು, ಐಸಿಸಿ ಬೌಲರ್‌ಗಳ ರ‍್ಯಾಂಕಿಂಗ್ನಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.

 ರವಿವಾರ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡ ನಾಯಕ ವಿರಾಟ್ ಕೊಹ್ಲಿ ನಂ. 1 ಸ್ಥಾನ ಮತ್ತು ಅಂತಿಮ ಪಂದ್ಯದಲ್ಲಿ ಶತಕ ದಾಖಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಉಪನಾಯಕ ರೋಹಿತ್ ಶರ್ಮಾ ನಂ.2 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮೂರು ಪಂದ್ಯಗಳಲ್ಲಿ 183 ರನ್ , ರೋಹಿತ್ ಶರ್ಮಾ ಅಂತಿಮ ಪಂದ್ಯದಲ್ಲಿ ಶತಕ ಸೇರಿದಂತೆ 171 ರನ್ ಜಮೆ ಮಾಡಿದ್ದರು.

 ಕೊಹ್ಲಿ (886 ಪಾಯಿಂಟ್ಸ್) ಮತ್ತು ರೋಹಿತ್ (868 ಪಾಯಿಂಟ್ಸ್) ಕ್ರಮವಾಗಿ 2 ಮತ್ತು ಮೂರು ರೇಟಿಂಗ್ ಪಾಯಿಂಟ್ಸ್ ನ್ನು ಖಾತೆಗೆ ಸೇರಿಸಿಕೊಂಡು ಮೊದಲ ಎರಡು ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬ್ಯಾಟಿಂಗ್‌ನಲ್ಲಿ ಪಾಕಿಸ್ತಾನದ ಬಾಬರ್ ಆಝಂ (829 ಪಾಯಿಂಟ್ಸ್) ಮೂರನೇ ಸ್ಥಾನ ಪಡೆದಿರುವುದಾಗಿ ಐಸಿಸಿ ಪ್ರಕಟನೆೆಯಲ್ಲಿ ತಿಳಿಸಿದೆ.

  ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಶಿಖರ ಧವನ್ 7 ಸ್ಥಾನಗಳ ಭಡ್ತಿ ಪಡೆದು 15ನೇ ಸ್ಥಾನಕ್ಕೇರಿದ್ದಾರೆ. ಅವರು ಮೊದಲೆರಡು ಪಂದ್ಯಗಳಲ್ಲಿ ಒಟ್ಟು 170 ರನ್ ಗಳಿಸಿದ್ದರು. ಕೊನೆಯ ಪಂದ್ಯದಲ್ಲಿ ಭುಜ ನೋವಿನ ಕಾರಣದಿಂದಾಗಿ ಬ್ಯಾಟಿಂಗ್ ಮಾಡಲಿಲ್ಲ.

ಲೋಕೇಶ್ ರಾಹುಲ್ 146 ರನ್‌ಗಳೊಂದಿಗೆ 21 ಸ್ಥಾನಗಳ ಭಡ್ತಿ ಪಡೆದು 50ನೇ ಸ್ಥಾನ ಪಡೆದಿದ್ದಾರೆ.

  ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 764 ಪಾಯಿಂಟ್ಸ್‌ನೊಂದಿಗೆ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ನ್ಯೂಝಿಲ್ಯಾಂಡ್‌ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್, ಅಫ್ಘಾನಿಸ್ತಾನದ ಮುಜೀಬುರ್ರಹ್ಮಾನ್, ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ ಮತ್ತು ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಅಗ್ರ 5ರಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ರವೀಂದ್ರ ಜಡೇಜ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ 4 ವಿಕೆಟ್ ಪಡೆದು ನಂ.27ನೇ ಸ್ಥಾನ ಮತ್ತು 45 ರನ್ ಗಳಿಸಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿದ್ದಾರೆ. ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅಂತಿಮ ಏಕದಿನ ಪಂದ್ಯದಲ್ಲಿ 131 ರನ್ ಸೇರಿದಂತೆ ಸರಣಿಯಲ್ಲಿ ಒಟ್ಟು 229 ರನ್ ಗಳಿಸಿ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ನಂ. 23ನೇ ಸ್ಥಾನ, ಮಾಜಿ ಅಗ್ರ ಶ್ರೇಯಾಂಕದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನಂ.6, ಆಸೀಸ್ ನಾಯಕ ಆ್ಯರೊನ್ ಫಿಂಚ್ ನಂ.10, ವಿಕೆಟ್ ಕೀಪರ್ ಅಲೆಕ್ಸ್ ಕಾರಿ ನಂ.31ನೇ ತಮ್ಮದಾಗಿಸಿಕೊಂಡಿದ್ದಾರೆ.

ಲೆಗ್‌ಸ್ಪಿನ್ನರ್ ಆ್ಯಡಮ್ ಝಾಂಪ ಸರಣಿಯಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದರು. ಅವರು 37ನೇ ಸ್ಥಾನಕ್ಕೆ ಮತ್ತು ಕೇನ್ ರಿಚರ್ಡ್ಸನ್ 65ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News