ಇಶಾಂತ್ ಶರ್ಮಾಗೆ ಗಾಯದ ಭೀತಿ

Update: 2020-01-20 17:54 GMT

ಹೊಸದಿಲ್ಲಿ, ಜ.20: ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾಗೆ ಸೋಮವಾರ ಇಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕಣಕಾಲು ನೋವು ಕಾಣಿಸಿಕೊಂಡಿದೆ. ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಘೋಷಿಸುವ ಮೊದಲು ಇಶಾಂತ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿದೆ. ವಿದರ್ಭ ವಿರುದ್ಧ ಪಂದ್ಯದಲ್ಲಿ ದಿಲ್ಲಿಯ ಬೌಲಿಂಗ್ ದಾಳಿಯ ನೇತೃತ್ವವನ್ನು ವಹಿಸಿದ್ದ 31ರ ಹರೆಯದ ಇಶಾಂತ್ ಗಾಯದ ಪ್ರಮಾಣ ಇನ್ನೂ ಗೊತ್ತಾಗಿಲ್ಲ. ಆದರೆ, ಅವರು ಮೈದಾನದಿಂದ ಹೊರಹೋಗುವ ಸಂದರ್ಭದಲ್ಲಿ ಸಹಾಯಕ ಸಿಬ್ಬಂದಿಯ ನೆರವನ್ನು ಪಡೆದಿದ್ದರು. ವಿದರ್ಭದ ಎರಡನೇ ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಇಶಾಂತ್‌ಗೆ ಗಾಯವಾಗಿತ್ತು.

 ಇಶಾಂತ್ ಎಸೆದ ಶಾರ್ಟ್ ಎಸೆತವನ್ನು ವಿದರ್ಭ ನಾಯಕ ಫೈಝ್ ಫಝಲ್ ಎದುರಿಸಲು ಮುಂದಾದ ಸಂದರ್ಭದಲ್ಲಿ ಚೆಂಡು ಪ್ಯಾಡ್‌ಗೆ ತಗಲಿತ್ತು. ಆಗ ಇಶಾಂತ್ ಔಟ್‌ಗಾಗಿ ಮನವಿ ಮಾಡುತ್ತಿದ್ದಾಗ ತಕ್ಷಣವೇ ಜಾರಿಬಿದ್ದರು.

ಆಗ ಅವರಿಗೆ ನೋವುಕಾಣಿಸಿಕೊಂಡಿದ್ದು, ತಕ್ಷಣವೇ ವೈದ್ಯಕೀಯ ನೆರವು ಪಡೆದರು. ಇಶಾಂತ್ ವಿದರ್ಭದ ಮೊದಲ ಇನಿಂಗ್ಸ್‌ನಲ್ಲಿ 45 ರನ್‌ಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. 96 ಟೆಸ್ಟ್ ಪಂದ್ಯಗಳನ್ನು ಆಡಿರುವ ಇಶಾಂತ್ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿತ್ತು. ಇಶಾಂತ್‌ಗೆ ಇದು ಈ ಋತುವಿನಲ್ಲಿ ಕೊನೆಯ ರಣಜಿ ಪಂದ್ಯವಾಗಿತ್ತು.

ಇಶಾಂತ್ ಹ್ಯಾಮಿಲ್ಟನ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡುವ ಸಾಧ್ಯತೆಯಿತ್ತು. ಒಂದು ವೇಳೆ ಗಾಯ ಗಂಭೀರ ಸ್ವರೂಪದ್ದಾಗಿದ್ದರೆ ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ(ಎನ್‌ಸಿಎ)ತೆರಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News