ಸೈನಾ, ಶ್ರೀಕಾಂತ್ ಒಲಿಂಪಿಕ್ ಕನಸನ್ನು ಜೀವಂತವಾಗಿರಿಸಲು ಯತ್ನ

Update: 2020-01-21 17:40 GMT

ಬ್ಯಾಂಕಾಕ್, ಜ.21: ಮುಂದಿನ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಇನ್ನೂ ತಮ್ಮ ಸ್ಥಾನವನ್ನು ದೃಢಪಡಿಸಿಲ್ಲ. ಥಾಯ್ಲೆಂಡ್ ಮಾಸ್ಟರ್ಸ್‌ನಲ್ಲಿ ಒಲಿಂಪಿಕ್ಸ್‌ಗೆ ಅವಕಾಶ ದೃಢಪಡಿಸುವ ವಿಶ್ವಾಸ ಹೊಂದಿದ್ದಾರೆ.

ಬುಧವಾರ ಇಲ್ಲಿ ನಡೆಯಲಿರುವ ಥಾಯ್ಲೆಂಡ್ ಮಾಸ್ಟರ್ಸ್ ಸೂಪರ್ 300 ಪಂದ್ಯಾವಳಿಯಲ್ಲಿ ಸೈನಾ ನೆಹ್ವಾಲ್ ಮತ್ತು ಕೆ. ಶ್ರೀಕಾಂತ್ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.

2019ರಲ್ಲಿ ಸೈನಾ ಮತ್ತು ಶ್ರೀಕಾಂತ್ ಬಿಡಬ್ಲುಎಫ್ ಟೋಕಿಯೊ ಶ್ರೇಯಾಂಕದಲ್ಲಿ 22 ಮತ್ತು 23ನೇ ಸ್ಥಾನಗಳನ್ನು ಹೊಂದಿದ್ದಾರೆ. ಎಪ್ರಿಲ್26 ಒಲಿಂಪಿಕ್ ಅರ್ಹತೆಗಾಗಿ ಕೊನೆಯ ದಿನವಾಗಿದೆೆ.

ಬಿಡಬ್ಲ್ಯುಎಫ್ ಒಲಿಂಪಿಕ್ಸ್ ಅರ್ಹತಾ ನಿಯಮಗಳ ಪ್ರಕಾರ ಎಪ್ರಿಲ್ 26ರೊಳಗೆ ಶ್ರೇಯಾಂಕ ಅಗ್ರ 16 ರೊಳಗೆ ಇದ್ದರೆ ಪ್ರತಿ ಸಿಂಗಲ್ಸ್ ವಿಭಾಗದ ಇಬ್ಬರು ಆಟಗಾರರು ಮಾತ್ರ ಅರ್ಹತೆ ಪಡೆಯಬಹುದು.

ವಿಶ್ವ ಚಾಂಪಿಯನ್ ಪಿ.ವಿ ಸಿಂಧು 6ನೇ ಸ್ಥಾನ ಮತ್ತು ಬಿ ಸಾಯಿ ಪ್ರಣೀತ್ 11ನೇ ಸ್ಥಾನ ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (8ನೇ ಸ್ಥಾನ) ಟೋಕಿಯೋ ಕ್ರೀಡಾಕೂಟಕ್ಕೆ ತಮ್ಮ ಸ್ಥಾನವನ್ನು ಬಹುತೇಕ ದೃಢಪಡಿಸಿದ್ದಾರೆ.

ಕಳೆದ ವರ್ಷ ಸರಣಿಯಲ್ಲಿ ಆರಂಭದ ನಿರ್ಗಮನದ ನಂತರ ಸೈನಾ ಮತ್ತು ಶ್ರೀಕಾಂತ್ ಅಭ್ಯಾಸ ನಡೆಸಲು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಿಂದ ದೂರ ಉಳಿದಿದ್ದರು.

ಮೊದಲ ಎರಡು ಪಂದ್ಯಾವಳಿಗಳಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರಿಂದ ಶ್ರೀಕಾಂತ್‌ಗೆ ಹೊಸ ವರ್ಷದ ಆರಂಭ ಉತ್ತಮವಾಗಿರಲಿಲ್ಲ. ಮಲೇಶ್ಯ ಓಪನ್‌ನಲ್ಲಿ ಚೀನಾ ತೈಪೆಯ ಚೌ ಟಿಯೆನ್ ಚೆನ್ ಮತ್ತು ಇಂಡೋನೇಶ್ಯ ಓಪನ್‌ನಲ್ಲಿ ಸ್ಥಳೀಯ ಆಟಗಾರ ಶೇಸರ್ ಹಿರೆನ್ ರುಸ್ತಾವಿಟೊ ವಿರುದ್ಧ ಸೋತರು.

ಲಂಡನ್ ಒಲಿಂಪಿಕ್ಸ್ ಕಂಚು ಪಡೆದ ಸೈನಾ ಮಲೇಶ್ಯ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತನಕ ಸಾಗಿದ್ದರು. ಆದರೆ ಇಂಡೋನೇಶ್ಯ ಮಾಸ್ಟರ್ಸ್‌ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲ ಸುತ್ತಿನಲ್ಲಿ ಜಪಾನ್‌ನಸಯಕಾ ಟಕಹಾಶಿ ಎದುರು ಸೋಲುಂಡರು. ಎಪ್ರಿಲ್‌ನಲ್ಲಿ ಕೊನೆಗೊಳ್ಳುವ ಒಲಿಂಪಿಕ್ ಅರ್ಹತಾ ದಿನಾಂಕದ ಮೊದಲು ಥಾಯ್ಲೆಂಡ್ ಮಾಸ್ಟರ್ಸ್ ಸೇರಿದಂತೆ ಎಂಟು ಪಂದ್ಯಾವಳಿಗಳು ಅವರಿಗೆ ಉಳಿದಿವೆ . ಟೋಕಿಯೋಗೆ ಟಿಕೆಟ್ ಗಳಿಸಲು ಭಾರತೀಯ ಜೋಡಿ ಸ್ಥಿರ ಪ್ರದರ್ಶನ ನೀಡಬೇಕಾಗುತ್ತದೆ.

ಸೈನಾ ತನ್ನ ಅಭಿಯಾನವನ್ನು ಡೆನ್ಮಾರ್ಕ್‌ನ ಲೈನ್ ಹಿಜ್ಮಾರ್ಕ್ ಜಾಯೆರ್ಸ್‌ಫೆಲ್‌ಡ್ತ್ ವಿರುದ್ಧ ಪ್ರಾರಂಭಿಸಲಿದ್ದು, ಎದುರಾಳಿಯ ವಿರುದ್ಧ 4-0 ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ.

ಮತ್ತೊಂದೆಡೆ, ಶ್ರೀಕಾಂತ್ ಅವರು ಆರಂಭಿಕ ಸುತ್ತಿನಲ್ಲಿ ಮತ್ತೊಮ್ಮೆ ಶೆಸರ್ ಹಿರೆನ್ ರುಸ್ತಾವಿಟೊ ಅವರನ್ನು ಎದುರಿಸಲಿದ್ದಾರೆ ಮತ್ತು ಈ ಬಾರಿ ಜಯ ಗಳಿಸುವ ವಿಶ್ವಾಸದಲ್ಲಿದ್ದಾರೆ.

2019ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಸಮೀರ್ ವರ್ಮಾ, ಏಳನೇ ಶ್ರೇಯಾಂಕಿತ ಮಲೇಶ್ಯದ ಲೀ ಝಿಯಾ ಜಿಯಾ ವಿರುದ್ಧ ಸೆಣಸಲಿದ್ದಾರೆ. ಆರಂಭಿಕ ಸುತ್ತಿನಲ್ಲಿ ಎಚ್.ಎಸ್. ಪ್ರಣಯ್ ಮಲೇಶ್ಯದ ಇನ್ನೊಬ್ಬ ಆಟಗಾರ ಲೈವ್ ಡೇರೆನ್ ಅವರನ್ನು ಎದುರಿಸಲಿದ್ದಾರೆ.

ಈ ಬಾರಿ ಡಬಲ್ಸ್ ಸ್ಪರ್ಧೆಗಳ ಮುಖ್ಯ ಡ್ರಾದಲ್ಲಿ ಭಾರತೀಯರಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News