×
Ad

ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2020-01-21 23:12 IST

ಬ್ಲೋಮ್‌ಫಾಂಟೇನ್, ಜ.21:ಹಾಲಿ ಚಾಂಪಿಯನ್ ಭಾರತ ಐಸಿಸಿ ಅಂಡರ್ -19 ವಿಶ್ವಕಪ್‌ನಲ್ಲಿ ಜಪಾನ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

 ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿತ್ತು. ಜಪಾನ್‌ನ್ನು ಬ್ಯಾಟಿಂಗ್‌ಗೆ ಇಳಿಸಿ 41 ರನ್ ಗಳಿಗೆ ನಿಯಂತ್ರಿಸಿದ ಭಾರತ, ಬಳಿಕ 4.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿ 10 ವಿಕೆಟ್‌ಗಳ ಜಯ ದಾಖಲಿಸಿತು. ಇದು ಭಾರತಕ್ಕೆ ಎರಡನೇ ಜಯವಾಗಿದೆ. ಮೊದಲ ಪಂದ್ಯದಲ್ಲಿ ರವಿವಾರ ಶ್ರೀಲಂಕಾ ವಿರುದ್ಧ 90 ರನ್‌ಗಳ ಜಯ ಗಳಿಸಿತ್ತು. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್ ಔಟಾಗದೆ 29 ರನ್(18ಎ, 5ಬೌ, 1ಸಿ) ಮತ್ತು ಕುಮಾರ್ ಕುಶಾಗ್ರ ಔಟಾಗದೆ 13 ರನ್(11ಎ, 2ಬೌ) ಗಳಿಸಿ ತಂಡದ ಗೆಲುವಿಗೆ ನೆರವಾದರು.

 5 ಮಂದಿ ಶೂನ್ಯ : ಭಾರತದ ಬೌಲರ್‌ಗಳಾದ ರವಿ ಬಿಶ್ನೋಯಿ(5ಕ್ಕೆ 4), ಕಾರ್ತಿಕ್ ತ್ಯಾಗಿ (10ಕ್ಕೆ 3), ಅಕಾಶ್ ಸಿಂಗ್(11ಕ್ಕೆ 2) ಮತ್ತು ವಿದ್ಯಾಧರ್ ಪಾಟೀಲ್ (8ಕ್ಕೆ 1) ದಾಳಿಗೆ ತತ್ತರಿಸಿದ ಜಪಾನ್ 22.5 ಓವರ್‌ಗಳಲ್ಲಿ 41 ರನ್‌ಗಳಿಗೆ ಆಲೌಟಾಗಿದೆ. ಇದು ಅಂಡರ್ -19 ವಿಶ್ವಕಪ್‌ನ ಇತಿಹಾಸದಲ್ಲಿ ಎರಡನೇ ಕನಿಷ್ಠ ಸ್ಕೋರ್ ಆಗಿದೆ. ಜಪಾನ್ ತಂಡದ ಆಟಗಾರರ ಪೈಕಿ ಯಾರಿಗೂ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ. ಐದು ಮಂದಿ ಖಾತೆ ತೆರಯದೆ ಶೂನ್ಯಕ್ಕೆ ಔಟಾದರು. ಶು ನೊಗುಚಿ (7) ಮತ್ತು ಕೆಂಟೊ ಒಟಾ ಡೊಬೆಲ್ (7) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ಮ್ಯಾಕ್ಸ್ ಕ್ಲೆಮೆಂಟ್ಸ್ 5ರನ್ ಗಳಿಸಿದರು. ಜಪಾನ್ ದಾಖಲಿಸಿದ 41 ರನ್‌ನಲ್ಲಿ 6ಮಂದಿ ಆಟಗಾರರು ಒಟ್ಟು 22 ರನ್ ತಂಡದ ಖಾತೆಗೆ ಜಮೆ ಮಾಡಿದ್ದರು. ಜಪಾನ್ ತಂಡಕ್ಕೆ 19 ಇತರ ರನ್ (ವೈಡ್ 12) ಸೇರ್ಪಡೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News