ನ್ಯೂಝಿಲ್ಯಾಂಡ್‌ ಪ್ರವಾಸ: ಶಿಖರ್ ಧವನ್ ಹೊರಕ್ಕೆ

Update: 2020-01-21 17:49 GMT

ಮುಂಬೈ, ಜ.21: ಬೆಂಗಳೂರಿನಲ್ಲಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಶಿಖರ್ ಧವನ್ ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.

ಧವನ್ ಅವರ ಭುಜಕ್ಕೆ ಗಾಯವಾಗಿದ್ದು, ಸೋಮವಾರ ತಂಡದೊಂದಿಗೆ ಪ್ರಯಾಣ ಮಾಡಲಿಲ್ಲ. ಬಿಸಿಸಿಐ ಇನ್ನೂ ಬದಲಿ ಆಟಗಾರನನ್ನು ಘೋಷಣೆ ಮಾಡಿಲ್ಲ. ಮೊಣಕಾಲಿನ ಗಾಯದಿಂದ ಇತ್ತೀಚೆಗೆ ವೆಸ್ಟ್ ಇಂಡೀಸ್ ಸರಣಿಯನ್ನು ತಪ್ಪಿಸಿಕೊಂಡ ಧವನ್ ಅವರ ಭುಜದ ಗಾಯವು ಇತ್ತೀಚಿನ ಹಿನ್ನಡೆಯಾಗಿದೆ. ಇದಕ್ಕೂ ಮುನ್ನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಬ್ಯಾಟಿಂಗ್ ಮಾಡುವಾಗ ಅವರ ಬೆರಳಿಗೆ ಪೆಟ್ಟಾಗಿತ್ತು. ಬಳಿಕ ಯಾವುದೇ ಪಂದ್ಯದಲ್ಲಿ ಆಡಲಿಲ್ಲ. ವಿಶ್ವಕಪ್‌ನಲ್ಲಿ ಉಳಿದ ಪಂದ್ಯಗಳಲ್ಲಿ ಆಡದೆ ತವರಿಗೆ ವಾಪಸಾಗಿದ್ದರು.

ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಗಾಯಗೊಂಡು ಹೊರ ನಡೆದಿದ್ದರು. ಬಳಿಕ ಅವರು ಆಡಲಿಲ್ಲ. ಇತ್ತೀಚಿನ ದಿನಗಳಲ್ಲಿ ಧವನ್ ಟ್ವೆಂಟಿ-20 ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಲೋಕೇಶ್ ರಾಹುಲ್ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸ್ಥಿರತೆಯನ್ನು ತೋರಿಸಿದ್ದಾರೆ. ಧವನ್ ಶ್ರೀಲಂಕಾ ವಿರುದ್ಧ ಇತ್ತೀಚೆಗೆ ಟ್ವೆಂಟಿ-20 ಸರಣಿಯಲ್ಲಿ ಆಡಿದ್ದು, ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 32 ಮತ್ತು 52 ರನ್ ಗಳಿಸಿದರು. 15 ಇನಿಂಗ್ಸ್‌ಗಳಲ್ಲಿ ಒಂದು ಅರ್ಧಶತಕ ದಾಖಲಿಸಿದ್ದರು. ಏಕದಿನ ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಎರಡು ಬಾರಿ ಬ್ಯಾಟಿಂಗ್ ಮಾಡಿದ ಧವನ್ 74 ಮತ್ತು 96 ರನ್ ಗಳಿಸಿದ್ದರು. ನ್ಯೂಝಿಲ್ಯಾಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಮೊದಲನೆಯ ಪಂದ್ಯ ಫೆಬ್ರವರಿ 5 ರಿಂದ ನಡೆಯಲಿದ್ದು, ಆ ಹೊತ್ತಿಗೆ ಧವನ್ ಚೇತರಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ಇತ್ತೀಚೆಗೆ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಇಲೆವೆನ್ ವಿರುದ್ಧ 100 ಎಸೆತ ಗಳಲ್ಲಿ 150 ರನ್ ಗಳಿಸಿದ ಪೃಥ್ವಿ ಶಾ ಅವರು ಧವನ್ ಸ್ಥಾನ ತುಂಬುವ ಸಾಧ್ಯತೆ ಇದೆ. ರೋಹಿತ್‌ಗೆ ನ್ಯೂಝಿಲ್ಯಾಂಡ್ ಪ್ರವಾಸಕ್ಕಾಗಿ ಟ್ವೆಂಟಿ-20 ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ತೆರವುಗೊಳಿಸಿದ್ದರು. ಮಾಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ಅವರು ಖಾಲಿ ಇರುವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲ ಟ್ವೆಂಟಿ-20 ಶುಕ್ರವಾರ (ಜನವರಿ 24) ಆಕ್ಲೆಂಡ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News