ನ್ಯೂಝಿಲ್ಯಾಂಡ್‌ ವಿರುದ್ಧ ಟೆಸ್ಟ್ ಸರಣಿಗಿಲ್ಲ ಇಶಾಂತ್

Update: 2020-01-21 17:53 GMT

ಮುಂಬೈ, ಜ.21: ಭಾರತದ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಮುಂದಿನ ತಿಂಗಳು ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದಾರೆ.  ರಣಜಿ ಟ್ರೋಫಿ ಪಂದ್ಯದ ವೇಳೆ ಅವರಿಗೆ ಗಾಯವಾಗಿದ್ದು, ಆಡಲು ಅಸಮರ್ತರಾಗಿದ್ದಾರೆ ಎಂದು ದಿಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ದಿಲ್ಲಿ ಪರ ಆಡುತ್ತಿರುವ ಇಶಾಂತ್ ಸೋಮವಾರ ವಿದರ್ಭ ವಿರುದ್ಧ ಬೌಲಿಂಗ್ ಮಾಡುವಾಗ ಕಣಕಾಲಿನ ನೋವಿಗೆ ಒಳಗಾಗಿದ್ದರು. ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಫೆಬ್ರವರಿ 21 ರಿಂದ ವೆಲ್ಲಿಂಗ್ಟನ್‌ನಲ್ಲಿ ಪ್ರಾರಂಭವಾಗಲಿದೆ.

ಎಂಆರ್‌ಐ ವರದಿಯ ಪ್ರಕಾರ ಇಶಾಂತ್ ಶರ್ಮಾ ಅವರ ಕಾಲಿಗೆ ಆಗಿರುವ ಗಾಯ ಗಂಭೀರವಾಗಿದೆ. ಅವರಿಗೆ ಆರು ವಾರಗಳ ವಿಶ್ರಾಂತಿ ನೀಡಲಾಗಿದೆ. ಇದು ನಿಜಕ್ಕೂ ದೊಡ್ಡ ಹೊಡೆತ ಎಂದು ಡಿಡಿಸಿಎ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹರಾ ತಿಳಿಸಿದ್ದಾರೆ. ಇಶಾಂತ್ ಅವರ ಗಾಯದ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಟೆಸ್ಟ್ ತಂಡದಲ್ಲಿ 96 ಟೆಸ್ಟ್ ಆಡಿರುವ ಅನುಭವಿ ಆಟಗಾರ ಇಶಾಂತ್ ಶರ್ಮಾ ಬದಲಿಗೆ ದಿಲ್ಲಿ ವೇಗಿ ಸಹ ಆಟಗಾರ ನವದೀಪ್ ಸೈನಿ ಸ್ಥಾನ ಪಡೆಯಲಿದ್ದಾರೆ.

ಕಳೆದ ತಿಂಗಳು ಹೈದರಾಬಾದ್ ವಿರುದ್ಧ ಆರಂಭಿಕ ಪಂದ್ಯವನ್ನು ಆಡಿದ ಇಶಾಂತ್ ಈ ಋತುವಿನಲ್ಲಿ ತಮ್ಮ ಎರಡನೇ ರಣಜಿ ಟ್ರೋಫಿಯ ಮಧ್ಯದಲ್ಲಿದ್ದರು.

31ರ ಹರೆಯದ ಇಶಾಂತ್ ಶರ್ಮಾ ಅವರು ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರನ್ನೊಳಗೊಂಡ ಭಾರತದ ವೇಗದ ಬೌಲಿಂಗ್ ದಾಳಿ ವಿಭಾಗದ ವಿಭಾಜ್ಯ ಅಂಗವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News