ಕುಸಿದ ಮುಂಬೈಗೆ ಸರ್ಫರಾಝ್ ದ್ವಿಶತಕದ ನೆರವು

Update: 2020-01-27 17:26 GMT

ಧರ್ಮಶಾಲಾ, ಜ.27: ಅಪೂರ್ವ ಫಾರ್ಮ್‌ನಲ್ಲಿರುವ ಸರ್ಫರಾಝ್ ಖಾನ್ ದಾಖಲಿಸಿದ ದ್ವಿಶತಕದ ನೆರವಿನಿಂದ ಮುಂಬೈ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಸುಸ್ಥಿತಿಯಲ್ಲಿದೆ.

ಪಂದ್ಯದ ಮೊದಲ ದಿನವಾದ ಸೋಮವಾರ ಮುಂಬೈ ತಂಡ ಬೇಗನೇ 5 ವಿಕೆಟ್‌ಗಳನ್ನು ಕಳೆದುಕೊಂಡರೂ, ಮಂದಬೆಳಕಿನ ಕಾರಣದಿಂದಾಗಿ ದಿನದಾಟ ಬೇಗನೆ ಕೊನೆಗೊಂಡಾಗ ಮುಂಬೈ ಸರ್ಫರಾಝ್ ದ್ವಿಶತಕದ ಸಹಾಯದಿಂದ 75 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 372 ರನ್ ಗಳಿಸಿದೆ. ಸರ್ಫರಾಝ್ ಔಟಾಗದೆ 226 ರನ್ ಗಳಿಸಿದ್ದಾರೆ.

22ರ ಹರೆಯದ ಸರ್ಫರಾಝ್ ಉತ್ತರ ಪ್ರದೇಶ ತಂಡದ ವಿರುದ್ಧ ಕಳೆದ ಪಂದ್ಯದಲ್ಲಿ ತ್ರಿಶತಕ ದಾಖಲಿಸಿದ್ದರು. ಅವರು ಇಂದು ದಾಖಲಿಸಿದ 226 ರನ್‌ಗಳಲ್ಲಿ 32 ಬೌಂಡರಿ ಮತ್ತು 4 ಸಿಕ್ಸರ್‌ಗಳು ಒಳಗೊಂಡಿವೆ.

ಎಚ್‌ಪಿಸಿಎ ಸ್ಟೇಡಿಯಂನಲ್ಲಿ ಆತಿಥೇಯ ಹಿಮಾಚಲ ಪ್ರದೇಶ ತಂಡ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿತ್ತು. ತವರಿನ ಸ್ಟೇಡಿಯಂನಲ್ಲಿ ವೇಗಿಗಳು ಮುಂಬೈನ 3 ವಿಕೆಟ್‌ಗಳನ್ನು ಬೇಗನೇ ಉರುಳಿಸಿದರು. 16ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡ ಮುಂಬೈ ತಂಡ ಸಂಕಷ್ಟಕ್ಕೆ ಸಿಲುಕಿತು. ಬಲಗೈ ಮಧ್ಯಮ ವೇಗಿ ವೈಭವ್ ಅರೋರ ಅವರು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜೈ ಬಿಸ್ತಾ(12) ಮತ್ತು ಭುಪೆನ್ ಲಾಲ್ವಾಣಿ(1) ವಿಕೆಟ್ ಉರುಳಿಸಿದರು. ಹಾರ್ದಿಕ್ ಟಾಮೊರೆ (2) ಅವರು ಕಡಿಮೆ ಮೊತ್ತಕ್ಕೆ ಕೆ.ಡಿ.ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಸರ್ಫರಾಝ್ ತಂಡಕ್ಕೆ ಆಸರೆಯಾದರು. ಸರ್ಫರಾಝ್ ಅವರು ಸಿದ್ದೇಶ್ ಲಾಡ್(20) ಜೊತೆಯಾಟದಲ್ಲಿ 4ನೇ ವಿಕೆಟ್‌ಗೆ 55 ರನ್‌ಗಳನ್ನು ಸೇರಿಸಲು ನೆರವಾದರು. ಮಧ್ಯಮ ವೇಗಿ ರಾಘವ್ ಧವನ್ ಇವರ ಜೊತೆಯಾಟವನ್ನು ಮುರಿದರು. ಲಾಡ್ ನಿರ್ಗಮಿಸಿದಾಗ ಮುಂಬೈ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 118 ರನ್.

 ಈ ಹಂತದಲ್ಲಿ ಆದಿತ್ಯ ತಾರೆ , ಸರ್ಫರಾಝ್‌ಗೆ ಜೊತೆಯಾದರು. ಭೋಜನ ವಿರಾಮದ ಬಳಿಕ ಸರ್ಫರಾಝ್ ಸತತ ಎರಡನೇ ಶತಕ ದಾಖಲಿಸಿದರು. ತಾರೆ ಮತ್ತು ಸರ್ಫರಾಝ್ 5ನೇ ವಿಕೆಟ್‌ಗೆ 143 ರನ್‌ಗಳ ಜೊತೆಯಾಟ ನೀಡಿದರು. ತಾರೆ 12 ರನ್ ಗಳಿಸಿದ್ದಾಗ ಜೀವದಾನ ಪಡೆದರು. ಇದರ ಸದುಪಯೋಗಪಡಿಸಿಕೊಂಡ ತಾರೆ 62 ರನ್ ಗಳಿಸಿ ಪೆವಿಲಿಯನ್ ಸೇರಿದರು. ಅವರು ರಾಘವ್ ಧವನ್ ಎಸೆತದಲ್ಲಿ ಅಂಕಿತ್ ಕಾಲ್ಸಿಗೆ ಕ್ಯಾಚ್ ನೀಡಿದರು.

  6ನೇ ವಿಕೆಟ್‌ಗೆ ಸರ್ಫರಾಝ್ ಮತ್ತು ಶುಭಮನ್ ರಂಜನೆ (ಔಟಾಗದೆ 44) ಮುರಿಯದ ಜೊತೆಯಾಟದಲ್ಲಿ 158 ರನ್‌ಗಳನ್ನು ಸೇರಿಸಿದರು. ಸಫರ್ರಾಝ್ ದ್ವಿಶತಕ ದಾಖಲಿಸಿದ್ದು, ತ್ರಿಶತಕ ದಾಖಲಿಸುವ ಹಾದಿಯಲ್ಲಿದ್ದಾರೆ. ಒಂದು ವೇಳೆ ಅವರು ತ್ರಿಶತಕ ದಾಖಲಿಸಿದರೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News