ರಣಜಿ ಟ್ರೋಫಿ: 2ನೇ ದಿನವೂ ರೈಲ್ವೇಸ್ ಬ್ಯಾಟಿಂಗ್ ಗೆ ಮಳೆ, ಮಂದ ಬೆಳಕು ಅಡ್ಡಿ

Update: 2020-01-28 16:50 GMT

ಹೊಸದಿಲ್ಲಿ, ಜ.28: ಕರ್ನಾಟಕ ಮತ್ತು ರೈಲ್ವೇಸ್ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯಕ್ಕೆ ಎರಡನೇ ದಿನವೂ ಮಳೆ ಮತ್ತು ಮಂದ ಬೆಳಕು ಅಡ್ಡಿಪಡಿಯಾಗಿದೆ.

 ಸೋಮವಾರ ರೈಲ್ವೇಸ್ ತಂಡ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸುವಷ್ಟರಲ್ಲಿ ಮಂದ ಬೆಳಕಿನಿಂದಾಗಿ ಮೊದಲ ದಿನದ ಆಟ ಮುಕ್ತಾಯಗೊಂಡಿತ್ತು. ಎರಡನೇ ದಿನವಾದ ಮಂಗಳವಾರ ಆಟ ಮುಂದುವರಿಸಿದ ರೈಲ್ವೇಸ್ ಈ ಮೊತ್ತಕ್ಕೆ 62 ರನ್ ಸೇರಿಸಿತು. ಮಂಗಳವಾರ 23 ಓವರ್‌ಗಳ ಆಟ ಸಾಧ್ಯವಾಯಿತು. ರೈಲ್ವೇಸ್ 72 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 160 ರನ್ ಗಳಿಸಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು.

ಮೊದಲ ದಿನದ ಮುಕ್ತಾಯಕ್ಕೆ ನಾಯಕ ಅರೀಂದಮ್ ಘೋಷ್ ಔಟಾಗದೆ 32 ರನ್ ಮತ್ತು ಅವಿನಾಶ್ ಯಾದವ್ ಔಟಾಗದೆ 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಮಂಗಳವಾರ ಇವರಿಬ್ಬರು ಬ್ಯಾಟಿಂಗ್ ಮುಂದುವರಿಸಿ 7ನೇ ವಿಕೆಟ್‌ಗೆ 97 ರನ್ ಜೊತೆಯಾಟ ನೀಡಿದರು. ಅವಿನಾಶ್ ಅರ್ಧಶತಕ ದಾಖಲಿಸಿದರು. ಅವರು 62 ರನ್ (143ಎ, 10ಬೌ) ಗಳಿಸಿ ರೋನಿತ್ ಮೋರೆ ಎಸೆತದಲ್ಲಿ ಪಡಿಕ್ಕಲ್‌ಗೆ ಕ್ಯಾಚ್ ನೀಡಿದರು. ಆದರೆ ನಾಯಕ ಘೋಷ್ ತಾಳ್ಮೆಯ ಆಟದ ಮೂಲಕ ಅರ್ಧಶತಕ ಗಳಿಸಿದರು. 8ನೇ ವಿಕೆಟ್‌ಗೆ ಅಮಿತ್ ಮಿಶ್ರಾ ಮತ್ತು ಘೋಷ್ 18 ರನ್ ಗಳಿಸಿದ್ದಾರೆ. ಮಿಶ್ರಾ ಔಟಾಗದೆ 10 ರನ್ ಮತ್ತು ಘೋಷ್ ಔಟಾಗದೆ 50 ರನ್ ಗಳಿಸಿ ಬ್ಯಾಟಿಂಗ್‌ನ್ನು ಮೂರನೇ ದಿನಕ್ಕೆ ಕಾಯ್ದಿರಿಸಿದ್ದಾರೆ. ಇಂದು ಪತನಗೊಂಡ ರೈಲ್ವೇಸ್‌ನ 1 ವಿಕೆಟ್‌ನ್ನು ರೋನಿತ್ ಮೋರೆ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News