ಆಸ್ಟ್ರೇಲಿಯ ವಿರುದ್ಧ ಅಂಡರ್-19 ವಿಶ್ವಕಪ್ ಕ್ವಾ. ಫೈನಲ್‌: ಗೆಲುವಿಗೆ 234 ರನ್ ಗುರಿ ನೀಡಿದ ಭಾರತ

Update: 2020-01-28 16:55 GMT

 ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ), ಜ.28: ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ಕೆಳ ಕ್ರಮಾಂಕದ ಆಟಗಾರ ಅಥರ್ವ ಅಂಕೋಲೇಕರ್ ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡ ಅಂಡರ್-19 ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಗೆಲುವಿಗೆ 234 ರನ್ ಗುರಿ ನೀಡಿದೆ. ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 233 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನ(14)ಮೊದಲ ವಿಕೆಟ್‌ಗೆ 35 ರನ್ ಜೊತೆಯಾಟ ನಡೆಸಲಷ್ಟೇ ಶಕ್ತರಾದರು. ವನ್‌ಡೌನ್ ದಾಂಡಿಗ ತಿಲಕ್ ವರ್ಮಾ(2)ಹಾಗೂ ನಾಯಕ ಪ್ರಿಯಂ ಗರ್ಗ್(5)ಬೇಗನೆ ಔಟಾದರು. ಭಾರತ 54 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 4ನೇ ವಿಕೆಟ್‌ಗೆ ಧುೃವ ಜುರೆಲ್(15) ಜೊತೆ 48 ರನ್ ಜೊತೆಯಾಟ ನಡೆಸಿದ ಜೈಸ್ವಾಲ್ ತಂಡಕ್ಕೆ ಆಸರೆಯಾದರು. ಸಿಕ್ಸರ್ ಸಿಡಿಸುವ ಮೂಲಕ 73 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜೈಸ್ವಾಲ್ 26ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಸ್ಪಿನ್ನರ್ ತನ್ವೀರ್ ಸಂಘಾಗೆ ವಿಕೆಟ್ ಒಪ್ಪಿಸುವ ಮೊದಲು ಜೈಸ್ವಾಲ್ 82 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 62 ರನ್ ಗಳಿಸಿದರು. ಜುರೆಲ್ (15) ಹಾಗೂ ಸಿದ್ದೇಶ್ ವೀರ್(25) ಔಟಾದಾಗ ಭಾರತದ ಸ್ಕೋರ್ 144ಕ್ಕೆ6. ಆಗ ತಂಡಕ್ಕೆ ಆಸರೆಯಾದ ಅಥರ್ವ(ಔಟಾಗದೆ 55, 54 ಎಸೆತ, 5 ಬೌಂಡರಿ, 1 ಸಿಕ್ಸರ್)ಸ್ಪಿನ್ನರ್ ರವಿ ಬಿಶ್ನೋಯ್(30, 31 ಎಸೆತ)ಏಳನೇ ವಿಕೆಟ್‌ಗೆ 61 ರನ್ ಅಮೂಲ್ಯ ಜೊತೆಯಾಟ ನಡೆಸಿ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಆಸ್ಟ್ರೇಲಿಯದ ಪರ ಕೆಲ್ಲಿ(2-45)ಹಾಗೂ ಮುರ್ಫಿ(2-40)ತಲಾ ಎರಡು ವಿಕೆಟ್ ಪಡೆದರು.

 ಗೆಲ್ಲಲು 234 ರನ್ ಗುರಿ ಪಡೆದಿರುವ ಆಸ್ಟ್ರೇಲಿಯ ಆರಂಭಿಕ ಆಘಾತಕ್ಕೆ ಒಳಗಾಗಿದ್ದರೂ 34ನೇ ಓವರ್ ಅಂತ್ಯಕ್ಕೆ 5 ವಿಕೆಟ್‌ಗಳ ನಷ್ಟಕ್ಕೆ 115 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News