ಪಾಕಿಸ್ತಾನದಲ್ಲಿ ನಡೆಯುವ ಏಶ್ಯಕಪ್‌ನಲ್ಲಿ ಭಾಗವಹಿಸುವುದಿಲ್ಲ: ಬಿಸಿಸಿಐ ಸ್ಪಷ್ಟನೆ

Update: 2020-01-28 16:58 GMT

ಹೊಸದಿಲ್ಲಿ, ಜ.28: ಪಾಕಿಸ್ತಾನ 2020ರ ಏಶ್ಯಕಪ್ ಆತಿಥ್ಯವಹಿಸಿಕೊಳ್ಳುವ ವಿಚಾರಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಏಶ್ಯಕಪ್ ತಟಸ್ಥ ಸ್ಥಳದಲ್ಲಿ ನಡೆಯಬೇಕು. ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ಕ್ರಿಕೆಟ್ ತಂಡ ಅಲ್ಲಿಗೆ ಹೋಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಟೂರ್ನಮೆಂಟ್‌ನ ಆತಿಥ್ಯವಹಿಸುತ್ತಿರುವುದು ಒಂದು ಪ್ರಶ್ನೆಯಲ್ಲ. ಟೂರ್ನಿ ಯಾವ ಸ್ಥಳದಲ್ಲಿ ನಡೆಯುತ್ತದೆ ಎನ್ನುವುದು ಮುಖ್ಯ. ನಮಗೆ ತಟಸ್ಥ ಸ್ಥಳದ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದೇವೆ. ಬಹು ರಾಷ್ಟ್ರಗಳು ಭಾಗವಹಿಸುವ ಏಶ್ಯಕಪ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಆಡಲು ಪಾಕ್‌ಗೆ ಪ್ರಯಾಣಿಸುವ ದಾರಿಯೇ ನಮಗಿಲ್ಲ. ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಭಾರತ ಇಲ್ಲದ ಏಶ್ಯಕಪ್‌ಗೆ ಅನುಮತಿ ನೀಡಿದರೆ, ಅದೊಂದು ವಿಭಿನ್ನ ಟೂರ್ನಿ ಆಗಲಿದೆ. ಏಶ್ಯಕಪ್‌ನಲ್ಲಿ ಭಾರತ ಭಾಗವಹಿಸಬೇಕಾದರೆ, ಟೂರ್ನಿ ನಡೆಯುವ ಸ್ಥಳ ಪಾಕಿಸ್ತಾನ ಆಗಿರಬಾರದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2018ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಬೇಕಾಗಿದ್ದ ಏಶ್ಯಕಪ್ ಟೂರ್ನಿ ಯುಎಇಗೆ ಸ್ಥಳಾಂತರಗೊಳ್ಳಲು ಪಾಕಿಸ್ತಾನ ಆಟಗಾರರ ವೀಸಾ ವಿಚಾರವೇ ಪ್ರಮುಖ ಕಾರಣವಾಗಿತ್ತು. ಪಿಸಿಬಿ ಕೂಡ ಇದನ್ನೇ ಮಾಡಬೇಕಾಗಿದೆ. ಏಶ್ಯಕಪ್‌ನ್ನು ತಟಸ್ಥ ತಾಣದಲ್ಲಿ ಆಯೋಜಿಸಬೇಕು. ತಟಸ್ಥ ಸ್ಥಳ ಯಾವಾಗಲೂ ಒಂದು ಪರ್ಯಾಯವಾಗಿರುತ್ತದೆ. ಬಿಸಿಸಿಐ 2018ರಲ್ಲಿ ತಟಸ್ಥ ಸ್ಥಳದಲ್ಲಿ ಏಶ್ಯಕಪ್‌ನ್ನು ಆಯೋಜಿಸಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News