ಪಾಕಿಸ್ತಾನದ ಟ್ವೆಂಟಿ-20 ವಿಶ್ವಕಪ್ ತಂಡದಲ್ಲಿ ಹಫೀಝ್,ಮಲಿಕ್ ಸೇರ್ಪಡೆ

Update: 2020-01-28 17:50 GMT

ಕರಾಚಿ, ಜ.28: ಆಸ್ಟ್ರೇಲಿಯ ನೆಲದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಹಿರಿಯ ಆಟಗಾರರಾದ ಮುಹಮ್ಮದ್ ಹಫೀಝ್ ಹಾಗೂ ಶುಐಬ್ ಮಲಿಕ್‌ರನ್ನು ಸೇರಿಸಿಕೊಳ್ಳುವ ಚಿಂತನೆ ನಡೆಸಲಾಗಿದೆ ಎಂದು ಪಾಕ್‌ನ ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ಮಿಸ್ಬಾವುಲ್ ಹಕ್ ಸುಳಿವು ನೀಡಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಟೂರ್ನಿಯಿಂದ ಬೇಗನೆ ನಿರ್ಗಮಿಸಿದ ಬಳಿಕ ಇಬ್ಬರು ಹಿರಿಯ ಆಟಗಾರರಾದ ಹಫೀಝ್ ಹಾಗೂ ಮಲಿಕ್‌ರನ್ನು ತಂಡದಿಂದ ಕೈಬಿಡಲಾಗಿತ್ತು. ದೀರ್ಘ ಸಮಯದ ಬಳಿಕ ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ಸ್ವದೇಶದಲ್ಲಿ ನಡೆದ ಟ್ವೆಂಟಿ-20 ಸರಣಿಗೆ ಹಫೀಝ್ ಹಾಗೂ ಮಲಿಕ್‌ಗೆ ಸ್ಥಾನ ನೀಡಲಾಗಿತ್ತು.

ಸ್ವದೇಶದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯ ಬಳಿಕ ಹಿರಿಯ ಆಟಗಾರರ ಸೇವೆ ತಂಡಕ್ಕೆ ಅಗತ್ಯವಿದೆ ಎಂದು ಮಿಸ್ಬಾ ಮನಗಂಡಿದ್ದರು.

  ‘‘ನಮಗೆ ಟ್ವೆಂಟಿ-20 ವಿಶ್ವಕಪ್‌ಗೆ ತಯಾರಾಗಲು ಹೆಚ್ಚು ಸಮಯವಿಲ್ಲ. ನಮ್ಮ ಶ್ರೇಷ್ಠ ಆಟಗಾರರೊಂದಿಗೆ ನಾವು ಕಣಕ್ಕಿಳಿಯಬೇಕಾಗುತ್ತದೆ. ವಿಶ್ವಕಪ್‌ಗೆ ನಮ್ಮ ತಂಡವನ್ನು ಕಟ್ಟಬೇಕಾಗಿದೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಗೆಲ್ಲುವುದು ನಮಗೆ ಅತ್ಯಂತ ಮುಖ್ಯವಾಗಿತ್ತು. ನಮ್ಮ ಗೆಲುವಿಗೆ ಹಫೀಝ್ ಹಾಗೂ ಮಲಿಕ್ ಕಾಣಿಕೆ ನೀಡಿರುವುದರಿಂದ ನನಗೆ ಸಂತಸವಾಗಿದೆ’’ ಎಂದು ಮಿಸ್ಬಾವುಲ್ ಹಕ್ ಹೇಳಿದ್ದಾರೆ. ಐದನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಫೆ.20ರಿಂದ ಮಾ.22ರ ತನಕ ನಡೆಯಲಿದೆ. ಈ ಟೂರ್ನಿಯು ಏಶ್ಯಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್‌ಗೆ ತಂಡವನ್ನು ಅಂತಿಮಗೊಳಿಸಲು ಆಯ್ಕೆಗಾರರಿಗೆ ನೆರವಾಗಲಿದೆ ಎಂದು ಮಿಸ್ಬಾ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News