×
Ad

ಕೆನಿನ್‌ಗೆ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಕಿರೀಟ

Update: 2020-02-01 23:09 IST

ಮೆಲ್ಬೋರ್ನ್, ಫೆ.1: ಸ್ಪೇನ್‌ನ ಗಾರ್ಬೈನ್ ಮುಗುರುಝರನ್ನು ಮಣಿಸಿದ ಅಮೆರಿಕದ ಸೋಫಿಯಾ ಕೆನಿನ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇಲ್ಲಿ ಶನಿವಾರ ರಾಡ್ ಲಾವರ್ ಅರೆನಾದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 21ರ ಹರೆಯದ ಕೆನಿನ್ ಅವರು ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡು ಮುಗುರುಝರನ್ನು 4-6, 6-2, 6-2 ಸೆಟ್‌ಗಳ ಅಂತರದಿಂದ ಸದೆಬಡಿದರು. ಮೆಲ್ಬೋರ್ನ್ ಪಾಕ್‌ನಲ್ಲಿ 14ನೇ ಶ್ರೇಯಾಂಕದೊಂದಿಗೆ ಕಣಕ್ಕಿಳಿದಿದ್ದ ಕೆನಿನ್ ಈ ತನಕ ಪ್ರಮುಖ ಟೂರ್ನಮೆಂಟ್‌ನಲ್ಲಿ ನಾಲ್ಕನೇ ಸುತ್ತನ್ನು ದಾಟಿಲ್ಲ. ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿಶ್ವದ ನಂ.1 ಆಟಗಾರ್ತಿ ಅಶ್ ಬಾರ್ಟಿ ಅವರನ್ನು ಮಣಿಸಿದ್ದ ಕೆನಿನ್ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು.

ಮುಗುರುಝ ಮಾಜಿ ನಂ.1 ರ್ಯಾಂಕಿನ ಆಟಗಾರ್ತಿಯಾಗಿದ್ದು, 2016ರಲ್ಲಿ ಫ್ರೆಂಚ್ ಓಪನ್ ಹಾಗೂ 2017ರಲ್ಲಿ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಂಡಿದ್ದರು.ಇದೀಗ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ವೈರಸ್ ಜ್ವರದಿಂದ ಚೇತರಿಸಿಕೊಂಡು ಮೆಲ್ಬೋರ್ನ್ ಗೆ ಆಗಮಿಸಿದ್ದ ಮುಗುರುಝ ತನ್ನ ಶಕ್ತಿಮೀರಿದ ಪ್ರಯತ್ನ ಫಲವಾಗಿ ಫೈನಲ್‌ಗೆ ತಲುಪಿದ್ದರು. 2017ರ ಬಳಿಕ ಮೊದಲ ಬಾರಿ ಮಹಿಳಾ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ತಲುಪುವ ಹಾದಿಯಲ್ಲಿದ್ದಾರೆ.

 ‘‘ನನ್ನ ಕನಸು ಅಧಿಕೃತವಾಗಿ ನನಸಾಯಿತೆಂದು ಹೇಳಬಲ್ಲೆ...ಇಲ್ಲಿ ನಿಂತುಕೊಂಡಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ವರ್ಷ ಇಲ್ಲಿಗೆ ವಾಪಸ್ ಬರಲು ಎದುರು ನೋಡುತ್ತಿರುವೆ...ಕಳೆದ ಎರಡು ವಾರಗಳು ನನ್ನ ಜೀವನದ ಶ್ರೇಷ್ಠ ದಿನಗಳಾಗಿದ್ದವು’’ಎಂದು ಪ್ರಶಸ್ತಿ ಜಯಿಸಿದ ಬಳಿಕ ಕೆನಿನ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News